ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದ ಮುಂದುವರಿದ ಭಾಗವಾಗಿ ಇಂದು ಸೈಕಲ್ ಜಾಥಾ ನಡೆಸಿ ಸರ್ಕಾರಕ್ಕೆ ಕಾಂಗ್ರೆಸ್ ಮತ್ತೆ ಬಿಸಿ ಮುಟ್ಟಿಸಿದೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಬಂಡ ಬಿಜೆಪಿ ಸರ್ಕಾರ ಬೆಲೆ ಇಳಿಸಿ ಜನರ ಹೊರೆ ಕಡಿಮೆ ಮಾಡುವವರೆಗೂ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದರು.
ಸೈಕಲ್ ಜಾಥಾ ವಿಧಾನಸೌಧಕ್ಕೆ ಆಗಮಿಸಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಡೀಸೆಲ್ 94 ಆಗಿದೆ. ಅಡುಗೆ ಅನಿಲ 880 ರೂ. ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.
ಪೆಟ್ರೋಲ್ ಬೆಲೆಯಲ್ಲಿ 25 ರೂ. ಡೀಸೆಲ್ ಬೆಲೆಯಲ್ಲಿ 20 ರೂ. ಹಾಗೂ ಅಡುಗೆ ಅನಿಲದ ಬೆಲೆ 150 ರೂ. ಕಡಿಮೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತಮ್ಮ ತಾಳಿ, ಒಡವೆ ಮಾರಿಕೊಂಡು ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ಜನರ ಆಸ್ಪತ್ರೆ ಬಿಲ್ ನೀಡಲಿಲ್ಲ, ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ. ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಅವರಿಗೆ ಧೈರ್ಯ ತುಂಬಲಿಲ್ಲ. ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವಿಂದು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ನಾವು ಮೊನ್ನೆ ಎತ್ತಿನ ಗಾಡಿಯಲ್ಲಿ ಸದನಕ್ಕೆ ಆಗಮಿಸಿದ್ದೆವು. ಇಂದು ಸೈಕಲ್ ಮೂಲಕ ಆಗಮಿಸಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ. ಜನರು ಕೂಡ ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕು ಎಂದು ಕರೆ ನೀಡುತ್ತೇನೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.