ಬೆಂಗಳೂರು:ಮಾಜಿ ಸಂಸದೆ ರಮ್ಯಾ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಬಹಿರಂಗ ಹೇಳಿಕೆ ನೀಡುವುದಿಲ್ಲ. ಯಾವುದೇ ಗೊಂದಲವಿದ್ದರೂ ಪಕ್ಷದ ವೇದಿಕೆಯಲ್ಲಿ ಸಮಾಲೋಚಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಮ್ಯಾ ಟ್ವೀಟ್ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ವಿಚಾರ ತಿಳಿದಿಲ್ಲ. ಎಂ.ಬಿ. ಪಾಟೀಲ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರು. ರಮ್ಯಾ ಅವರು ಪಕ್ಷದ ಮಾಜಿ ಸಂಸದೆ. ಇಬ್ಬರೂ ನಮಗೆ ಬೇಕಾದವರು. ಎಲ್ಲಿ, ಏನು ಅಪಾರ್ಥವಾಗಿದೆಯೋ ತಿಳಿದಿಲ್ಲ ಎಂದು ಹೇಳಿದರು.
ಮಾಧ್ಯಮಗಳು ನಮ್ಮ ಮನೆಗೆ ಬಂದು ಸಚಿವ ಅಶ್ವತ್ಥ್ ನಾರಾಯಣ್ ಅವರು ಎಂ.ಬಿ ಪಾಟೀಲ್ ಅವರ ಮನೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಕೇಳಿದರು. ನಾನು ರಕ್ಷಣೆಗೆ ಹೋಗಿರಬಹುದು ಎಂದು ಹೇಳಿದ್ದೇನೆ. ಇದರ ಹೊರತಾಗಿ ಬೇರೇನೂ ವಿಚಾರವಿಲ್ಲ. ಅನಗತ್ಯ ರಂಪಾಟ ಬೇಡ. ಯಾರಿಗೆ ಯಾವ ವಿಚಾರವಾಗಿ ನೋವಾಗಿದೆಯೋ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಚರ್ಚೆ ಮಾಡಲು ಸಿದ್ಧವಿಲ್ಲ ಎಂದರು.
ಹಗರಣಗಳ ಬಗ್ಗೆ ತನಿಖೆಯಾಗಲಿ:ಸರ್ಕಾರದ ಭ್ರಷ್ಟಾಚಾರ ಹಾಗೂ ಅಕ್ರಮವನ್ನು ಮುಚ್ಚಿಹಾಕುವ ಪ್ರಯತ್ನದ ಬಗ್ಗೆ ಚರ್ಚೆ ಮಾಡೋಣ. ಪಿಎಸ್ಐ ಹಗರಣ, ಎಫ್ಡಿಎ, ಕಿರಿಯ ಇಂಜಿನಿಯರ್ ನೇಮಕ ವಿಚಾರದಲ್ಲಿ ಏನಾಗಿದೆ ಎಂದು ತನಿಖೆ ಆಗಲಿ. ಈಗಾಗಲೇ ಬಂಧಿತರು ಜೆಇ ಹುದ್ದೆ ಅಕ್ರಮದಲ್ಲೂ ಭಾಗಿಯಾಗಿರುವುದಾಗಿ ಹೇಳಿಕೆ ನೀಡಿದ್ದರೂ ಅದನ್ನು ಪಕ್ಕಕ್ಕಿಟ್ಟು ಪಿಎಸ್ಐ ವಿಚಾರವನ್ನು ಮಾತ್ರ ತನಿಖೆ ಮಾಡುತ್ತಿದ್ದಾರೆ. ಇದು ದೊಡ್ಡ ಡೀಲ್, 300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪದಲ್ಲಿ ಸತ್ಯಾಂಶವಿದೆ. ಈ ವಿಚಾರದಲ್ಲಿ ಚಿಂತನೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ಓದಿ:ಬಂಡೆ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ್ರಾ ಮಾಜಿ ಸಂಸದೆ ರಮ್ಯಾ?