ಬೆಂಗಳೂರು:ನಗರದ ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆಯ ದರ್ಶನವಾಗಿದೆ.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಡಿಕೆಶಿ ಕೆಪಿಸಿಸಿ ಕಚೇರಿ ಪ್ರವೇಶಿಸುವುದಕ್ಕೆ ಸಾಕಷ್ಟು ತೊಂದರೆ ಉಂಟುಮಾಡಿದರು. ವಿಪರೀತ ಅಭಿಮಾನ ವ್ಯಕ್ತಪಡಿಸುವ ಉತ್ಸಾಹದಲ್ಲಿ ಒಂದೆರಡು ಬಾರಿ ಡಿ.ಕೆ.ಶಿವಕುಮಾರ್ ಅವರನ್ನೇ ತಳ್ಳಾಡಿಬಿಟ್ಟರು.
ಡಿಕೆಶಿ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ ಕೆಪಿಸಿಸಿ ಕಚೇರಿ ಪ್ರವೇಶ ದ್ವಾರದಲ್ಲಿ ಎರಡು ಬಾರಿ ಹಾಗೂ ಕಚೇರಿ ಒಳಗೆ ಸುದ್ದಿಗೋಷ್ಠಿ ಆಯೋಜಿಸಿದ್ದ ಕೊಠಡಿಯಲ್ಲಿ ಮತ್ತೊಮ್ಮೆ ಡಿಕೆಶಿಗೆ ಮುಜುಗರ ಆಗುವ ಸನ್ನಿವೇಶ ಕಂಡು ಬಂದಿದ್ದು, ಕಿರಿದಾದ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದೇ ಇದಕ್ಕೆ ಕಾರಣವಾಯಿತು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಗದ್ದಲ ಮಾಡದಂತೆ ಮನವಿ ಮಾಡಿಕೊಂಡರೂ ಅಭಿಮಾನಿಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಒಂದು ಹಂತದಲ್ಲಿ ಸುದ್ದಿಗೋಷ್ಠಿ ನಡೆಸುವುದಕ್ಕೂ ಕನಿಷ್ಠ ಮುಕ್ಕಾಲು ಗಂಟೆ ವಿಳಂಬ ಆಗುವಂತೆ ಅಭಿಮಾನಿಗಳು ನಡೆದುಕೊಂಡದ್ದು ಕಂಡುಬಂತು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮಾಡಿದ ಮನವಿಗೂ ಕಾರ್ಯಕರ್ತರು ಬಗ್ಗಲಿಲ್ಲ. ನಿನ್ನೆ ಸಂಜೆ 5.30ಕ್ಕೆ ನಡೆಯಬೇಕಿದ್ದ ಸುದ್ದಿಗೋಷ್ಠಿ 7 ಗಂಟೆಯಾದರೂ ಆರಂಭವಾಗದಿರುವುದಕ್ಕೆ ಅವರ ಅಭಿಮಾನಿಗಳ ನೂಕಾಟ ತಳ್ಳಾಟವೇ ಕಾರಣವಾಯಿತು. ಬಲವಂತವಾಗಿ ಒಂದಿಷ್ಟು ಮಂದಿಯನ್ನು ಹೊರದಬ್ಬಿ ನಂತರ ಸುದ್ದಿಗೋಷ್ಠಿ ನಡೆಸುವಂತಹ ಅನಿವಾರ್ಯತೆ ನಾಯಕರಿಗೆ ಎದುರಾದದ್ದು ವಿಪರ್ಯಾಸವೇ ಸರಿ.
ಇದೇ ರೀತಿ ಇವರ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಭೇಟಿಗೆ ಉತ್ಸುಕತೆ ತೋರಿಸಿದರು. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸಾಹಸವಾಯಿತು.