ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಭೆ ನಡೆಯಿತು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಸೇರಿದಂತೆ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಭಾಗಿಯಾಗಿದ್ದರು. ರಾಜ್ಯದಲ್ಲಿ ಕೊರೊನಾ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸ್ಪಂದನೆ, ಕೆಪಿಸಿಸಿ ಮತ್ತು ಜಿಲ್ಲಾ ಘಟಕಗಳು ರಚನೆ ಮಾಡಿರುವ ಕಂಟ್ರೋಲ್ ರೂಂ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯಿತು.
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸರ್ವಪಕ್ಷ ಮುಖಂಡರ ಸಭೆಗೆ ಒತ್ತಾಯ ಮಾಡಿದ್ದೀವಿ. ಸಿಎಂ ನಮ್ಮ ಮಾತು ಒಪ್ಪಿ ಸಭೆ ಕರೆದಿದ್ರು. ಸಭೆಯಲ್ಲಿ ನಿಮ್ಮ ಸರ್ಕಾರದ ಕೆಲ ಸಚಿವರಲ್ಲಿ ಗೊಂದಲ ಇದೆ ಅಂತ ಹೇಳಿದ್ವಿ. ಅದಕ್ಕೂ ಸಿಎಂ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಸರಿಪಡಿಸಿದ್ದಾರೆ ಎಂದರು.
ಕೊರೊನಾ ರಿಲೀಫ್ ಫಂಡ್ ಗೆ ದೇಣಿಗೆ ಕೊಡಲು ಮನವಿ ಮಾಡಿದ್ದೇನೆ. ಎಲ್ಲ ಶಾಸಕರು, ಸಂಸದರು, ಮಾಜಿ ಶಾಸಕರು ಸ್ಪಂದಿಸುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ನಿಲ್ಲಿಸಬಾರದು. ಉದ್ಯೋಗ ಕೊಡುವವರೆಗೂ ಊಟ ಕೊಡಬೇಕು. ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ ಕೆಲಸ ನಿಲ್ಲಿಸಿ. ಇವುಗಳ ನಿರ್ವಹಣೆಗೆ ತಗುಲುವ ಹಣವನ್ನು ಇಂದಿರಾ ಕ್ಯಾಂಟಿನ್ ನಡೆಸಲು ಬಳಸಿಕೊಳ್ಳಲಿ, ಆದ್ರೆ ಇಂದಿರಾ ಕ್ಯಾಂಟಿನ್ ನಲ್ಲಿ ಊಟ ತಿಂಡಿ ಕೊಡುವುದನ್ನು ನಿಲ್ಲಿಸುವುದು ಬೇಡ ಎಂದು ಹೇಳಿದರು.
ಒಂದು ಸಮುದಾಯ ಟಾರ್ಗೆಟ್ ಮಾಡುವುದು ಸರಿಯಲ್ಲ:ತಬ್ಲಿಘಿ ಜಮಾತ್ಗೆ ಹೋದವರಿಂದಲೇ ಕೊರೊನಾ ಹಬ್ಬುತ್ತಿದೆ ಅನ್ನೋ ಚರ್ಚೆ ಕುರಿತು ಮಾತನಾಡಿ, ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಇದು ಸರಿಯಲ್ಲ ಎಂದರು. ಬೆಂಕಿ ಬಿದ್ದ ಮನೆಯಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಕೆಲಸ ಕೆಲವರು ಮಾಡ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಕಮಿಷನರ್ ಹೇಳಿದ್ದಾರೆ. ವಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡ್ತಿದ್ದೇವೆ. ವಿಷನ್ ಕರ್ನಾಟಕ ಗ್ರೂಪ್ ರಚನೆ ಮಾಡಿದ್ದೇವೆ. ಆರ್ಥಿಕವಾಗಿ ಬಲಶಾಲಿ ಆಗಲು ಯಾವ ರೀತಿ ಕ್ರಮಗಳು ಅಗತ್ಯ ಎಂಬುದನ್ನು ತಿಳಿಯಲು ಈ ಕಮಿಟಿ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಕೊರೊನಾ ವಿಚಾರವಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಕೃಷ್ಣಬೈರೇಗೌಡ ಮತ್ತು ರಮೇಶ್ ಕುಮಾರ್ ಇದನ್ನ ನೋಡಿಕೊಳ್ಳಿದ್ದಾರೆ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದು ವಿವರಿಸಿದರು.
ತುರ್ತು ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿ:ಈ ಸಭೆಗೆ ಆಗಮಿಸುವ ಮುನ್ನ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಶ್ರೀ ಭಗವಾನ್ ಮಹಾವೀರ ಸ್ವಾಮಿ ಜನ್ಮ ಜಯಂತಿ ನಿಮಿತ್ತ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ತುರ್ತು ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.