ಬೆಂಗಳೂರು: ನಿನ್ನೆ ಸುದ್ದಿಗೋಷ್ಠಿಗೆ ಮುನ್ನ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಕೆಪಿಸಿಸಿ ಮಾಧ್ಯಮ ಸಮನ್ವಯಕಾರ ಸಲೀಂ ತಲೆದಂಡವಾಗಿದೆ.
ಉಗ್ರಪ್ಪಗೆ ಶೋಕಾಸ್ ನೋಟಿಸ್ ಪಕ್ಷದಿಂದ ಸಲೀಂ ಅವರನ್ನ ಉಚ್ಚಾಟಿಸಲಾಗಿದೆ. ಈ ಸಂಬಂಧ ಪ್ರದೇಶ ಕಾಂಗ್ರೆಸ್ ಸಮಿತಿ ಅಧಿಕೃತ ಆದೇಶ ಹೊರಡಿಸಿದೆ. ನಿನ್ನೆ ನಡೆದ ಸಂಭಾಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ ತ್ವರಿತವಾಗಿ ಈ ತೀರ್ಮಾನ ಕೈಗೊಂಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಆರು ವರ್ಷ ಅವಧಿಗೆ ಉಚ್ಚಾಟಿಸಿ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ಸಂದರ್ಭ ಸಲೀಂ ಹಾಗೂ ಉಗ್ರಪ್ಪ ನಡುವೆ ನಡೆದ ಸಂಭಾಷಣೆಯ ತನಿಖೆ ನಡೆಸಲು ಪಕ್ಷ ತೀರ್ಮಾನಿಸಿದೆ. ಈ ವಿಚಾರವಾಗಿ ಸಲ ಸ್ಪಷ್ಟೀಕರಣ ಪಡೆದು ಕಾಂಗ್ರೆಸ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಸಲೀಂಗೆ ಶೋಕಾಸ್ ನೋಟಿಸ್ ಮೊದಲು ಜಾರಿಯಾಗಲಿದೆ. ಪ್ರಾಥಮಿಕ ಸದಸ್ಯತ್ವದಿಂದ ಪ್ರಸ್ತುತ ಉಚ್ಚಾಟಿಸಲಾಗಿದ್ದು, ಸಂಭಾಷಣೆ ವಿಚಾರವಾಗಿ ಸಮಗ್ರ ತನಿಖೆ ನಡೆದ ಬಳಿಕ ಪಕ್ಷ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ಉಗ್ರಪ್ಪಗೆ ಶೋಕಾಸ್ ನೋಟಿಸ್:
ಕಾಂಗ್ರೆಸ್ ಶಿಸ್ತು ಸಮಿತಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪಗೆ ಶೋಕಾಸ್ ನೋಟಿಸ್ ನೀಡಿದ್ದು ಮೂರು ದಿನಗಳ ಒಳಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿದೆ. ನೋಟಿಸ್ನಲ್ಲಿ, ಪಕ್ಷದ ಹಿರಿಯ ನಾಯಕರಾದ ತಾವು ದಿನಾಂಕ 12-10-2021 ರಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಾಧ್ಯಮ ಸಂಯೋಜಕರಾದ ಎಂ.ಎ.ಸಲೀಂ ಅವರೊಂದಿಗೆ ಖಾಸಗಿಯಾಗಿ ಮಾತನಾಡುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಘನತೆ ಗೌರವಗಳಿಗೆ ಕುಂದುಂಟಾಗುವಂತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಹಾನಿ ಉಂಟಾಗುವಂತಹ ಅನೇಕ ವಿಚಾರಗಳನ್ನು ಮಾತನಾಡಿ ಕೊಂಡಿರುವುದು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು ಹೇಳಿದ್ದಾರೆ.
ತಾವು ಈ ಸಂದರ್ಭದಲ್ಲಿ ಮಾತನಾಡಿಕೊಂಡಿರುವ ವಿಚಾರಗಳು ಆಧಾರ ರಹಿತವಾಗಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಮತ್ತು ನಿರಾಕರಿಸುತ್ತದೆ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಈ ಮೇಲಿನ ನಡವಳಿಕೆಯ ಬಗ್ಗೆ ತಕ್ಷಣ ಸಮಜಾಯಿಷಿಯನ್ನು ಮೂರು ದಿನಗೊಳಗಾಗಿ ನೀಡಬೇಕಾಗಿ ಈ ಮೂಲಕ ಸೂಚಿಸಲಾಗಿದೆ ಎಂದು ಕೆ.ರಹಮಾನ್ ಖಾನ್ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಇದನ್ನೂಓದಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಕುರಿತ ಉಗ್ರಪ್ಪ-ಸಲೀಂ ಸಂಭಾಷಣೆಯ ವಿಡಿಯೋ