ಬೆಂಗಳೂರು:ಬಿಜೆಪಿ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ಅಳವಡಿಸಿ ಅವರ ವಿರುದ್ಧ ಅತ್ಯಂತ ಗಂಭೀರ ಟೀಕೆ ಹಾಗೂ ಅಪಪ್ರಚಾರವನ್ನು ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಎಕ್ಸ್ ಖಾತೆಯ ಸಾಮಾಜಿಕ ಜಾಲತಾಣವನ್ನು ಸ್ಥಗಿತಗೊಳಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆಪಿಸಿಸಿ ನಿಯೋಗ ಕೇಂದ್ರ ವಿಭಾಗದ ಸೈಬರ್ ಕ್ರೈಂಗೆ ದೂರು ನೀಡಿದೆ.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ವೈ.ಪುಟ್ಟರಾಜು ಹಲಸೂರು ಗೇಟ್ನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣವಾಗಿರುವ ಎಕ್ಸ್ ಖಾತೆಯಲ್ಲಿ (BJP@4india official Twitter) ಕಾಂಗ್ರೆಸ್ ಪಕ್ಷದ ನೆಚ್ಚಿನ ನಾಯಕರು ಹಾಗೂ ಸಂಸದರಾದ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಅವರ ವಿರುದ್ಧ ಸುಳ್ಳು ಆರೋಪವನ್ನು ಹಾಗೂ ಧರ್ಮವಿರೋಧಿ, ಶ್ರೀರಾಮನ ವಿರೋಧಿ ಎಂದು ಸುಳ್ಳು ಮಾಹಿತಿಯನ್ನು ಹಾಗೂ ಭಾರತದ ಆಧುನಿಕ ರಾವಣ ಎಂಬ ಪದಗಳನ್ನು ಬಳಸಿದ್ದಾರೆ. ಇದರಿಂದ ದೇಶದ ಹಾಗೂ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಅಭಿಮಾನಿಗಳಿಗೆ ಹಾಗೂ ಪಕ್ಷಕ್ಕೆ ತೀವ್ರ ನೋವು ಉಂಟಾಗಿದೆ ಎಂದು ಆಕ್ಷೇಪಿಸಲಾಗಿದೆ.
ಬಿಜೆಪಿ ಪಕ್ಷ ಉದ್ದೇಶಪೂರ್ವಕವಾಗಿ ಕಾರ್ಯಕರ್ತರನ್ನು ಹಾಗೂ ರಾಹುಲ್ ಗಾಂಧಿ ಅವರ ಅಭಿಮಾನಿಗಳನ್ನು ಕೆರಳಿಸುವ ಹಾಗೆ ಪ್ರಚೋದನೆ ಮಾಡುತ್ತಿದೆ. ಕೂಡಲೇ ಅವರ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿ ಅದನ್ನು ರದ್ದುಪಡಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ದೂರು ಸಲ್ಲಿಸುತ್ತಿದ್ದೇವೆ. ಹಾಗೂ ಜೆಡಿಎಸ್ ಕರುನಾಡು ಎಂಬ ಸಾಮಾಜಿಕ ಜಾಲತಾಣದಲ್ಲೂ ಸಹ ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಬಗ್ಗೆ ಅತ್ಯಂತ ಸುಳ್ಳು ಮಾಹಿತಿಯನ್ನು ರವಾನಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಲಾಗಿದೆ.
ಇನ್ನು ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ ಪಕ್ಷದ ನಾಯಕ ಮತ್ತು ನನ್ನ ಸಹೋದರನಾಗಿರುವ ರಾಹುಲ್ ಗಾಂಧಿಯನ್ನು ರಾವಣನಂತೆ ಗ್ರಾಫಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದಕ್ಕೆ ಟೀಕಿಸಿದ್ದರು. ಈ ಬಗ್ಗೆ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಪಿ ನಡ್ಡಾ ಅವರನ್ನು ಟ್ಯಾಗ್ ಮಾಡಿ, ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಅಧೋಗತಿಗೆ ಕೊಂಡೊಯ್ಯಲು ಬಯಸುತ್ತೀರಿ?, ಅಧಿಕೃತ ಟ್ವಿಟರ್‌ನಿಂದ ಪೋಸ್ಟ್ ಮಾಡಲಾಗುತ್ತಿರುವ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ?, ಪ್ರಮಾಣ ವಚನಗಳನ್ನು ಮರೆತಿದ್ದೀರಾ ?, ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುವ ಈ ಪ್ರಚೋದನಕಾರಿ ಟ್ವೀಟ್‌ಗಳನ್ನು ಹೇಗೆ ಅನುಮೋದಿಸುತ್ತಿದ್ದೀರಿ" ಎಂದು ಖಾರವಾಗಿಯೇ ಪ್ರಶ್ನಿಸಿದ್ದರು.
ಇದನ್ನೂ ಓದಿ:ರಾಹುಲ್ ಗಾಂಧಿ ಪೋಸ್ಟರ್ ವಿವಾದ: ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ