ಬೆಂಗಳೂರು :ರಾಜ್ಯ ಕಾಂಗ್ರೆಸ್ನ ಬಹುದಿನದ ಬೇಡಿಕೆಯಾಗಿದ್ದ ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆ ಪಕ್ಷದ ಹೈಕಮಾಂಡ್ ಅಂಕಿತ ಹಾಕಿದೆ. ಮೊದಲ ಹಂತದಲ್ಲಿ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆಯಾಗಿದ್ದು, ಕಳೆದ ಮೂರು ವರ್ಷದಿಂದ ನೆನಗುದಿಗೆ ಬಿದ್ದಿದ್ದ ನೇಮಕಕ್ಕೆ ಎಐಸಿಸಿ ಮುದ್ರೆಯೊತ್ತಿದೆ.
ಮೊದಲ ಹಂತದಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ. 40 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ, 109 ಮಂದಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ. ಈ ದಿನದ ಕಾಂಗ್ರೆಸ್ ಬೇಡಿಕೆಯನ್ನು ಚುನಾವಣೆ ವರ್ಷದಲ್ಲಿ ಈಡೇರಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಎಲ್ಲಾ ಸಮಿತಿಗಳನ್ನು ವಿಸರ್ಜನೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರನ್ನು ಉಳಿಸಿ ಉಳಿದ ಎಲ್ಲರ ಸ್ಥಾನವನ್ನು ವಿಸರ್ಜಿಸಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ ಕೆ ಶಿವಕುಮಾರ್, ಕಳೆದ ಎರಡೂವರೆ ವರ್ಷಗಳಿಂದ ಪದಾಧಿಕಾರಿಗಳ ನೇಮಕಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು.