ಬೆಂಗಳೂರು: ಕೊರೊನಾ ಸೋಂಕಿತರ ತಪಾಸಣೆ, ಚಿಕಿತ್ಸೆ, ಚಿಕಿತ್ಸಾ ವೆಚ್ಚ, ಆಸ್ಪತ್ರೆಗಳ ಲಭ್ಯತೆ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿರುವ ಹೈಕೋರ್ಟ್ ಮತ್ತಷ್ಟು ಮಾಹಿತಿಗಳ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಕೊರೊನಾ ಚಿಕಿತ್ಸೆ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಸೋಂಕು ತಗುಲಿದ ವ್ಯಕ್ತಿಗೆ ವರದಿ ನೀಡುವ ಬದಲಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದರೆ ಆತನನ್ನು ಮೆಸೇಜ್ ಆಧರಿಸಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ದಾಖಲಿಸಿಕೊಳ್ಳುತ್ತವೆಯೇ?, ಇದಕ್ಕಿರುವ ನಿಯಮಗಳೇನು?, ಖಾಸಗಿ ಆಸ್ಪತ್ರೆಗಳು ಪೇಷಂಟ್ ಕೋಡ್ ತಯಾರಿಸಬಹುದೇ?, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಐಸಿಯು ವೆಂಟಿಲೇಟರ್ ಸಿಗದಿದ್ದರೆ ಪರ್ಯಾಯ ಮಾರ್ಗವೇನು? ಆ್ಯಂಬುಲೆನ್ಸ್ ಎಷ್ಟಿವೆ? ನಿರ್ವಹಣೆ ಮತ್ತು ಲಭ್ಯತೆ ಹೇಗಿದೆ? ಎಂಬ ವಿವರಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ.
ಕನ್ನಡದಲ್ಲಿ ಮಾಹಿತಿ:
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಮತ್ತು ಬೆಡ್ಗಳ ವಿವರಗಳನ್ನು ಸರ್ಕಾರ ಮತ್ತು ಬಿಬಿಎಂಪಿಯ ವೆಬ್ ಸೈಟ್ಗಳಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಪೀಠ ಪರಿಗಣಿಸಿತು. ಆದ್ರೆ ಮಾಹಿತಿ ಕೇವಲ ಇಂಗ್ಲಿಷ್ ಭಾಷೆಯಲ್ಲಿದ್ದರೆ ಹೆಚ್ಚಿನ ಜನರಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ಈ ಮಾಹಿತಿಗಳನ್ನು ಕನ್ನಡ ಭಾಷೆಯಲ್ಲಿಯೂ ಪ್ರಕಟಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತು.