ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇದೇ ತಿಂಗಳು 28 ರಂದು ಆಯೋಜಿಸಿರುವ 'ಕೋಟಿ ಕಂಠ ಗಾಯನ' ಕಾರ್ಯಕ್ರಮದಲ್ಲಿ ಭಾಗವಹಿಸಲು ಬರೋಬ್ಬರಿ 1 ಕೋಟಿ 10 ಲಕ್ಷ ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ. ದೇಶ- ವಿದೇಶಗಳಿಂದ ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕನ್ನಡಿಗರು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಅಕ್ಟೋಬರ್ 28ರಂದು ಕೋಟಿ ಕಂಠಗಳಲ್ಲಿ ಕನ್ನಡದ ವೃಂದ ಗಾಯನ ಮೊಳಗಿ ದಾಖಲೆ ಸೃಷ್ಟಿಯಾಗಲಿದೆ.
ಈ ಕಾರ್ಯಕ್ರಮ ನಿಮಿತ್ತ ಇಲಾಖೆ ವತಿಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ಆರಂಭಿಸಲಾಗಿದ್ದು, ಇದರಲ್ಲಿ 29 ರಾಜ್ಯಗಳು ಹಾಗೂ 25 ರಾಷ್ಟ್ರಗಳಿಂದ ಕನ್ನಡ ಪ್ರೇಮಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಕ್ಯೂ ಆರ್ ಕೋಡ್ ನಲ್ಲಿ 1.1 ಕೋಟಿ ಹೆಸರುಗಳು ನೋಂದಣಿಯಾಗಿದ್ದವು. ಇದೀಗ ಈ ಸಂಖ್ಯೆ1.10 ಕೋಟಿಗೆ ತಲುಪಿದೆ. ಮುಂದಿನ ಎರಡು ದಿನಗಳಲ್ಲಿ ಈ ಸಂಖ್ಯೆ 1.50 ಕೋಟಿ ಮೀರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಪತ್ರಿಕಾ ಹೇಳಿಕೆ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಭೆ : ಈ ಕಾರ್ಯಕ್ರಮದ ನಿಮಿತ್ತ ಸಚಿವ ಸುನಿಲ್‌ಕುಮಾರ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಆಟೋ ಚಾಲಕರ ಸಂಘ, ಮಹಿಳಾ ಸ್ವಸಹಾಯ ಸಂಘ, ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯಿತಿ, ಐಟಿಬಿಟಿ ಉದ್ಯೋಗಿಗಳು, ವಿಶ್ವವಿದ್ಯಾಲಯ, ಶಾಲಾ-ಕಾಲೇಜು, ಚಾಲಕರ ಸಂಘ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಸಂಘಟನೆಗಳ ಜತೆಗೆ ಸಚಿವರು ಖುದ್ದು ಸಭೆ ನಡೆಸಿದ್ದಾರೆ.