ಕರ್ನಾಟಕ

karnataka

ETV Bharat / state

ಕರೆಂಟ್ ಬಿಲ್ ಕಟ್ಟಬೇಡಿ, ಮಹಿಳೆಯರು ಬಸ್ ಟಿಕೆಟ್ ತಗೊಬೇಡಿ: ಕೋಟ ಶ್ರೀನಿವಾಸ ಪೂಜಾರಿ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​ ಪಂಚ ಯೋಜನೆಗಳನ್ನು ಈಡೇರಿಸದಿದ್ದಲ್ಲಿ, ಬಿಜೆಪಿ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಹೇಳಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ

By

Published : May 22, 2023, 3:26 PM IST

ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿಗಳ ಮಾತಿನ ಮೇಲೆ ಭರವಸೆ ಇಟ್ಟು ರಾಜ್ಯದ ಜನರು 200 ಯುನಿಟ್ ವಿದ್ಯುತ್ ಬಿಲ್ ಕಟ್ಟಬೇಡಿ. ಅದಕ್ಕಿಂತ ಹೆಚ್ಚು ವ್ಯಯ ಮಾಡಿದರೆ ಬಿಲ್ ಕಟ್ಟಿ. ಹಾಗೆ ಮಹಿಳೆಯರು ಯಾರು ಬಸ್ ಟಿಕೆಟ್ ತಗೋಬೇಡಿ. ನಿರುದ್ಯೋಗಿ ಯುವಕರಿಗೆ ಹಣ ಮೂರು ಸಾವಿರ ನೀಡಿ. ಇಲ್ಲವಾದರೆ ಬಿಜೆಪಿ ನಿಮ್ಮ‌ ಮುಂದೆ ನಿಂತು ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ನನ್ನ ಸೇರಿದಂತೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಫ್ರೀ ಅಂತ ಹೇಳಿದ್ದರು. ಕರ್ನಾಟಕ 1.5 ಕೋಟಿ ಕುಟುಂಬಕ್ಕೆ ಈ ಯೋಜನೆ ಸಿಗಬೇಕು, ಅದಕ್ಕೆ 200 ಯೂನಿಟ್​ ವಿದ್ಯುತ್​ಗೆ ಯಾರೂ ಹಣ ಪಾವತಿಸುವುದು ಬೇಡ ಎಂದು ಕರೆ ನೀಡಿದರು.

ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3000ರೂಪಾಯಿ ಸಿಗಲಿ, ಅದೇ ರೀತಿಯಲ್ಲಿ ಅಕ್ಕಿ ಕೊಡುವುದು ಇದೆ, ಅವರ ಭರವಸೆಯಂತೆ ವ್ಯಕ್ತಿಯೊಬ್ಬರಿಗೆ ತಿಂಗಳಲ್ಲಿ 10 ಕೆಜಿ ಉಚಿತವಾಗಿ ಕೊಡಲಿ. ಮನೆಯ ಒಡತಿಗೆ ಗೃಹ ಲಕ್ಷ್ಮಿ ಯೋಜನೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಕೊಡುವುದಾಗಿ ತಿಳಿಸಿದ್ದರು. ಕೆಎಸ್ಆರ್‌ಟಿಸಿ ಬಸ್​ನಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಮಾಣದ ಘೋಷಣೆ ಮಾಡಿದ್ದರು. ಅದರಂತೆ ಜೂನ್​ ನಿಂದ ಮಹಿಳೆಯರು ಬಸ್ ಟಿಕೆಟ್ ಪಡೆಯದೇ ಪ್ರಯಾಣ ಮಾಡಬೇಕು.

ರಾಜ್ಯದ ಎಲ್ಲಾ ಫಲಾನುಭವಿಗಳು ಇದೆ ತಿಂಗಳಿನಿಂದ ಕಾಂಗ್ರೆಸ್​ನ ಗ್ಯಾರಂಟಿ ಯೋಜನೆ ಪಡೆದುಕೊಳ್ಳಬೇಕು, ಒಂದು ವೇಳೆ ಸಿಗದೇ ಇದ್ದರೆ ನಾವು ಸೇರಿಕೊಂಡು ಅವರಿಗೆ ನ್ಯಾಯ ಓದಗಿಸುತ್ತೇವೆ. ಹೋರಾಟಕ್ಕೆ ಇಳಿದು ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದರು.

ಇನ್ನು ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ತಮ್ಮ ಪ್ರಣಾಳಿಕೆಯಲ್ಲಿ ​ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ಈ 5 ಯೋಜನೆಗಳು ಜಾರಿಗೆ ತರಲಾಗುತ್ತದೆ ಎಂದು ಭರವಸೆ ಸಹ ನೀಡಿದ್ದರು.

ಐದು ಗ್ಯಾರಂಟಿಗಳ ಜಾರಿಗೆ ತಾತ್ವಿಕ ಅನುಮೋದನೆ: ಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದ ನೂತನ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್​ ನೀಡಿದ್ದ ಎಲ್ಲಾ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು.

ಗ್ಯಾರಂಟಿ ಯೋಜನಗೆಳು:ಕುಟುಂಬದ ಯಜಮಾನಿಗೆ ತಿಂಗಳು ಪ್ರತಿ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ತಾತ್ವಿಕ ಒಪ್ಪಿಗೆ ನೀಡಿ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ:ಕಾಂಗ್ರೆಸ್​​ನ ಐದು ಗ್ಯಾರಂಟಿಗಳ ಜಾರಿಗೆ ತಾತ್ವಿಕವಾಗಿ ಅನುಮೋದನೆ ನೀಡಿ ಸರ್ಕಾರ ಆದೇಶ!

ABOUT THE AUTHOR

...view details