ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಕಾಡುಪ್ರಾಣಿ ಹಾವಳಿ ತಡೆ ಕುರಿತು ಶೀಘ್ರ ಸಚಿವರ ನೇತೃತ್ವದಲ್ಲಿ ಸಭೆ: ಸಚಿವ ಶ್ರೀನಿವಾಸ ಪೂಜಾರಿ - ಕಾಡುಪ್ರಾಣಿ ಹಾವಳಿ ತಡೆ ಕುರಿತು ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

ಈಗಾಗಲೇ ಹುಲಿ ದಾಳಿ ಬಗ್ಗೆ ಸಾಕಷ್ಟು ಚರ್ಚೆ ನಡೆಸಿ, ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿರ್ಣಯವಾಗಿದೆ. ಅದರಂತೆ ಅರಣ್ಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಆದಷ್ಟು ಬೇಗ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗುತ್ತದೆ. ಚಕ್ರಪಾಣಿ ಅಧಿಕಾರಿ ಆರೋಪದ ಬಗ್ಗೆಯೂ ತನಿಖೆ ನಡೆಸಲು ಸೂಚಿಸಲಾಗುತ್ತದೆ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

kota-srinivasa-pojary
ಕೋಟಾ ಶ್ರೀನಿವಾಸ ಪೂಜಾರಿ

By

Published : Mar 29, 2022, 4:05 PM IST

ಬೆಂಗಳೂರು: ಕೊಡಗಿನಲ್ಲಿ ಕಂಡುಬರುತ್ತಿರುವ ಕಾಡುಪ್ರಾಣಿಗಳ ಹಾವಳಿ ತಡೆಯುವ ಕುರಿತು ಅರಣ್ಯ ಸಚಿವರ ನೇತೃತ್ವದಲ್ಲಿ ಆದಷ್ಟು ಬೇಗ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯೆ ವೀಣಾ ಅಚ್ಚಯ್ಯ, ಕೊಡಗಿನಲ್ಲಿ ನಿನ್ನೆ ಕಾರ್ಮಿಕನನ್ನ ಹುಲಿ ಬಲಿ ತೆಗೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು

ಕಳೆದ ಬಾರಿ ಇದೇ ಸಂದರ್ಭದಲ್ಲಿ ನಾಲ್ವರ ಮೇಲೆ ಹುಲಿ ದಾಳಿ ನಡೆಸಿತ್ತು. ಸಂಬಂಧಪಟ್ಟ ಅಧಿಕಾರಿಗಳು ಬೇಗ ಸ್ಥಳಕ್ಕೆ ಧಾವಿಸಿ ಬರಲ್ಲ. ಇದೇ ರೀತಿ ಮುಂದುವರೆದರೆ ಪರಿಹಾರ ಪಡೆಯಲೂ ಅಲ್ಲಿ ಜನ ಇರಲ್ಲ. ಹಾಗಾಗಲಿದೆ ಕೊಡಗು ಜಿಲ್ಲೆಯ ಪರಿಸ್ಥಿತಿ ಎಂದು ಸದನದ ಗಮನ ಸೆಳೆದರು. ಕೊಡಗಿನಲ್ಲಿ ಆನೆ ದಾಳಿ ಇದೆ, ಹುಲಿ ದಾಳಿಗಳು ನಡೆಯುತ್ತಿವೆ. ಕಾಳುಮೆಣಸು ಕೊಯ್ಲು ಈಗ ನಡೆಯುತ್ತಿದೆ. ಹುಲಿ ಭೀತಿಯಿಂದ ಕೂಲಿಗೆ ಬರಲು ಜನ ಭಯಪಡುತ್ತಿದ್ದಾರೆ. ಹೀಗಾದರೆ, ನಮ್ಮ ರೈತರು ಏನು ಮಾಡಬೇಕು?. ಅಲ್ಲಿ ಚಕ್ರಪಾಣಿ ಎನ್ನುವ ಅಧಿಕಾರಿ ಇದ್ದಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಜನ ಅವರ ವಿರುದ್ಧ ಧರಣಿ ಮಾಡುತ್ತಿದ್ದಾರೆ. ಅವರ ವರ್ಗಾವಣೆಗೆ ಒತ್ತಾಯಿಸುತ್ತಿದ್ದಾರೆ. ನಮಗೆ ಕಾಡುಪ್ರಾಣಿ ಹಾವಳಿಯಿಂದ ಕಷ್ಟವಾಗಿದೆ. ಜನ ಬೇಸತ್ತಿದ್ದಾರೆ. ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈಗಾಗಲೇ ಈ ಸಮಸ್ಯೆ ಬಗ್ಗೆ ಸಾಕಷ್ಟು ಚರ್ಚೆ ನಡೆಸಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿರ್ಣಯವಾಗಿದೆ. ಅದರಂತೆ ಅರಣ್ಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಆದಷ್ಟು ಬೇಗ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗುತ್ತದೆ. ಚಕ್ರಪಾಣಿ ಅಧಿಕಾರಿ ಆರೋಪದ ಬಗ್ಗೆಯೂ ತನಿಖೆ ನಡೆಸಲು ಸೂಚಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪೆಟ್ರೋಲ್- ಡೀಸೆಲ್ ದರ ಹೆಚ್ಚಳ ಪ್ರಸ್ತಾಪ: ರಾಜ್ಯದಲ್ಲಿ ಪೆಟ್ರೋಲ್​​-ಡೀಸೆಲ್ ಬೆಲೆ ಹೆಚ್ಚಳ ಕುರಿತು ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಗೊಂಡಿದ್ದು, ದರ ನಿಯಂತ್ರಣಕ್ಕೆ ಆಗ್ರಹ ಕೇಳಿ ಬಂದಿತು. ಆದರೆ, ಸರ್ಕಾರದಿಂದ ಈ ಪ್ರಸ್ತಾಪಕ್ಕೆ ಉತ್ತರ ಲಭ್ಯವಾಗಿಲ್ಲ. ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ತೈಲ ದರ ಹೆಚ್ಚಳದ ವಿಷಯ ಪ್ರಸ್ತಾಪಿಸಿದರು.

ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರ ಡೀಸೆಲ್-ಪೆಟ್ರೋಲ್ ದರ ಕಡಿತದಿಂದ ಸಿಹಿ ಸುದ್ದಿ ನೀಡಿತ್ತು. ರಾಜ್ಯದಲ್ಲಿಯೂ ದರ ಕಡಿತ ಮಾಡಿದ್ದು ಸ್ವಾಗತಾರ್ಹ. ಆದರೆ, ರಷ್ಯಾ, ಉಕ್ರೇನ್ ಯುದ್ಧ ನಂತರ ಈಗ ತೈಲ ದರ ಹೆಚ್ಚಾಗುತ್ತಿದ್ದು ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ. ದಿಢೀರ್ ಬೆಲೆ ಏರಿಳಿತದ ಕಾರಣ ಬಂಕ್​ಗಳಿಗೆ ಸರಿಯಾಗಿ ತೈಲ ವಿತರಣೆ ಆಗುತ್ತಿಲ್ಲ. ಸರ್ಕಾರ ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ, ವಿತರಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಅರುಣ್ ಪ್ರಸ್ತಾಪಕ್ಕೆ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಅರಣ್ಯ, ನಾಗರಿಕ ಸರಬರಾಜು ಸಚಿವರಿಂದ ಉತ್ತರ ಕೊಡಿಸಲಾಗುತ್ತದೆ ಎಂದು ತಿಳಿಸಿದರು.

ಓದಿ:ಸ್ವತಃ ಗೆದ್ದು, ಕಾಂಗ್ರೆಸ್‌ನ ಗೆಲ್ಲಿಸಿ ಸಿಎಂ ಆಗಲು ಸಿದ್ದರಾಮಯ್ಯ ಪಣ.. ಅಳೆದು ತೂಗಿ ಹೆಜ್ಜೆ ಇಡ್ತಿರುವ ಮೈಸೂರು ಜಾಣ..

For All Latest Updates

TAGGED:

ABOUT THE AUTHOR

...view details