ಬೆಂಗಳೂರು:ಬಗರ್ ಹುಕ್ಕುಂ ಸಮಿತಿ ಮಂಜೂರು ಮಾಡಿದ ಸಾಗುವಳಿದಾರರಿಗೆ ಮಂಜೂರಾತಿ ಪತ್ರವನ್ನು ತಿಂಗಳೊಳಗೆ ನೀಡುವಂತೆ ಹಾಗೂ ಸಾಗುವಳಿ ಪತ್ರ ನೀಡಿದ ಮಾಹಿತಿಯನ್ನು ವಾರದೊಳಗೆ ಇಲಾಖೆಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆನೇಕಲ್ ತಾಲೂಕು ತಹಸೀಲ್ದಾರ್ ಅವರಿಗೆ ಸೂಚಿಸಿದರು.
ವಿಧಾನಸೌಧದಲ್ಲಿ ಇಂದು ಬೆಂಗಳೂರು ನಗರ ಜಿಲ್ಲೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆನೇಕಲ್ ತಾಲೂಕು ಬಗರ್ ಹುಕ್ಕುಂ ಸಮಿತಿ ಈಗಾಗಲೇ ಅರ್ಹರಿಗೆ ಭೂಮಿ ಮಂಜೂರಾತಿ ನೀಡಿದೆ. ಸ್ವಾಧೀನದಲ್ಲಿರುವವರಲ್ಲಿ ಶೋಷಿತ ಸಮುದಾಯದವರೇ ಹೆಚ್ಚು ಸಾಗುವಳಿದಾರರಾಗಿದ್ದಾರೆ. ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಮೇಲ್ವಿಚಾರಣಾ ಅಧಿಕಾರಿ ನೇಮಕ : ಆನೇಕಲ್ ತಾಲೂಕಿನಲ್ಲಿ ಒಟ್ಟು 694 ಅರ್ಜಿಗಳಲ್ಲಿ ಈವರೆಗೆ ಕೇವಲ 24 ಸಾಗುವಳಿ ಪತ್ರಗಳನ್ನು ಮಾತ್ರ ನೀಡಲಾಗಿದೆ. ಸಮಿತಿ ಮಂಜೂರು ಮಾಡಿರುವ ಎಲ್ಲ ಅರ್ಜಿಗಳ ಸಂಬಂಧ ಈಗಾಗಲೇ ಸ್ಥಳ ಪರಿಶೀಲನೆ ಹಾಗೂ ಸಂಬಂಧಿಸಿದ ಶುಲ್ಕ ಪಾವತಿಸಲಾಗಿದೆ. ತಹಸೀಲ್ದಾರ್ ಅವರು ಕೂಡಲೆ ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು. ಈ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ಮೇಲ್ಚಿಚಾರಣೆಗೆ ಇಲಾಖೆಯಿಂದ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದೂ ಸಚಿವರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ಡಾ. ಇ. ವೆಂಕಟಯ್ಯ, ಇಲಾಖೆ ಆಯುಕ್ತ ಡಾ.ಕೆ.ರಾಕೇಶಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಬಿ. ಉದಯಕುಮಾರ್ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್ ಶಿವಪ್ಪ ಲಮಾಣಿ ಸಭೆಯಲ್ಲಿ ಉಪಸ್ಥಿತರಿದ್ದರು.