ಬೆಂಗಳೂರು: ಚುನಾವಣೆ ಪ್ರಚಾರದ ವೇಳೆ ಪತಿ ಡಿಕೆ ರವಿ ಹೆಸರನ್ನ ಬಳಸಬೇಡಿ ಎಂದು ಸಲಹೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆಗೆ ರಾಜರಾಜೇಶ್ವರಿ ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪ್ರತ್ಯುತ್ತರ ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಶೋಭಾ ಕರಂದ್ಲಾಜೆಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರೀತಿಯ ಅಕ್ಕ, ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾರು? ಮಾಡುತ್ತಿರುವವರು ಯಾರು? ಎನ್ನುವುದನ್ನು ಇಡೀ ದೇಶವೇ ನೋಡಿದೆ, ನೋಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಅಕ್ಕ ಮಹಾದೇವಿಯವರ “ನೊಂದವರ ನೋವ ನೋಯದವರೆತ್ತ ಬಲ್ಲರೊ?” ಎಂಬ ವಚನ ನೆನಪಿಗೆ ಬರುತಿದೆ ಎಂದಿದ್ದಾರೆ.
ಶೋಭಾ ಕರಂದ್ಲಾಜೆ ಹೇಳಿಕೆಗೆ ಕುಸುಮ ಹನುಮಂತರಾಯಪ್ಪ ಖಡಕ್ ಪ್ರತಿಕ್ರಿಯೆ ರವಿ ಅವರ ಹೆಸರನ್ನು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದಿದ್ದೀರಿ! ಇದು ನಿಮಗೆ ನೀವೇ ಹೇಳಿದಂತೆ ಇದೆ. ಕನ್ನಡಿ ಮುಂದೆ ನಿಂತು ಇನ್ನೊಮ್ಮೆ ಈ ಹೇಳಿಕೆ ಕೊಟ್ಟು ನೋಡಿ. ಸತ್ಯ ಮನದಟ್ಟಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ನಿನ್ನೆ ಕುಸುಮ ಹನುಮಂತರಾಯಪ್ಪ ಅವರನ್ನು ಉದ್ದೇಶಿಸಿ ಮಾತನಾಡಿ ಪತಿ ಡಿಕೆ ರವಿ ಹೆಸರನ್ನ ಚುನಾವಣೆ ಪ್ರಚಾರ ಸಂದರ್ಭ ಬಳಸಬೇಡಿ ಎಂದು ತಿಳಿಸಿದ್ದರು. ಇದಕ್ಕೆ ಇಂದು ಕುಸುಮ ಪ್ರತಿಕ್ರಿಯೆ ನೀಡಿದ್ದಾರೆ.
ದಿನೇಶ್ ಗುಂಡೂರಾವ್ ಆಕ್ರೋಶ:
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕುಸುಮಾ ಪರ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕುಸುಮಾ, ಅವರ ಪತಿ ಡಿ.ಕೆ. ರವಿ ಹೆಸರು ಬಳಸದಂತೆ ಶೋಭಾ ಕರಂದ್ಲಾಜೆ ತಾಕೀತು ಮಾಡಿರುವುದು ಅವರ ಕೀಳು ಮನಸ್ಥಿತಿಯನ್ನು ಬಿಂಬಿಸುತ್ತದೆ. ಕುಸುಮಾ ಶಾಸ್ತ್ರೋಕ್ತವಾಗಿ ಡಿ.ಕೆ.ರವಿಯವರನ್ನು ವಿವಾಹವಾದವರು, ಹೆಂಡತಿಯಾಗಿ ಗಂಡನ ಹೆಸರು ಬಳಸುವ ಹಕ್ಕು ಅವರಿಗಿದೆ. ಒಂದು ಹೆಣ್ಣಾಗಿ ಶೋಭಾ ಕರಂದ್ಲಾಜೆ ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.