ಬೆಂಗಳೂರು: ಕೋರಮಂಗಲದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕ ರೋಚಕ ಕಹಾನಿ ಬಯಲಾಗಿದೆ. ಆರೋಪಿಗಳು ಮನೆ ಬಳಿ ಮಾಡಿದ್ದ ಕಸರತ್ತಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ ಲಕ್ಷ ಲಕ್ಷ ಹಣ ದೋಚಿ ಹೆಣ್ಣಿನ ಹಿಂದೆ ಹೋದವನು ವಿದೇಶಿ ಮದ್ಯದ ಆಸೆಗಾಗಿ ವಾಪಸ್ ಬಂದು ಪೊಲೀಸರ ಅತಿಥಿಯಾಗಿದ್ದ ಕಥೆ ಸಹ ಬಟಾಬಯಲಾಗಿದೆ.
ಮನೆಯಲ್ಲಿ ಹಣದ ಜೊತೆ ಯುಎಸ್ ಡಾಲರ್ಸ್ ಮತ್ತು ನಾಲ್ಕು ಬಾಟೆಲ್ ಫಾರಿನ್ ಸ್ಕಾಚ್ ದೋಚಿದ್ದ ಆರೋಪಿಗಳು ಅದರಲ್ಲಿ ಒಂದು ಬಾಟೆಲ್ ಸ್ಕಾಚ್ ಕುಡಿದು ಮುಗಿಸಿದ್ದರು. ಬಳಿಕ ಹೆಣ್ಣಿನ ಆಸೆಗಾಗಿ ಆರೋಪಿ ಜಗದೀಶ್ ತುಮಕೂರಿಗೆ ಹೋಗಿದ್ದ. ಇನ್ನೂ ಮೂರು ಬಾಟೆಲ್ ಸ್ಕಾಚ್ ಮತ್ತು ಯುಸ್ ಡಾಲರನ್ನ ಬೆಂಗಳೂರಿನಲ್ಲೇ ಇಟ್ಟಿರುವುದನ್ನ ನೆನೆಸಿಕೊಂಡ ಜಗದೀಶ್ ಪೊಲೀಸರಿಗೆ ಸಿಕ್ಕಿದ್ರೂ ಪರವಾಗಿಲ್ಲ ಅಂತಾ ಬೆಂಗಳೂರಿಗೆ ವಾಪಸಾಗಿದ್ದ. ಅಷ್ಟೊತ್ತಿಗಾಗಲೇ ಜಗದೀಶನ ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಹೊರಟಿದ್ದ ಕೋರಮಂಗಲ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು.