ಬೆಂಗಳೂರು: ಸಿಎಂ ಭರವಸೆಯ ಮೇರೆಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಡಿಸೆಂಬರ್ 12 ರಂದು ವಿಧಾನಸೌಧ ಮುತ್ತಿಗೆ ಹಾಕುವ ನಿರ್ಧಾರ ಕೈಬಿಟ್ಟಿದ್ದೇವೆ. ಆದರೆ ನಮ್ಮ ಬೇಡಿಕೆಯನ್ನು ಕಡೆಗಣಿಸಿದಲ್ಲಿ ಬೆಳಗಾವಿ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ ನೀಡಿದರು.
ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪಂಚಮಸಾಲಿ ನಿಯೋಗ ಭೇಟಿ ಮಾಡಿತು. ಸ್ವಾಮೀಜಿ ನೇತೃತ್ವದಲ್ಲಿ ಸಚಿವ ಸಿ.ಸಿ ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಒಳಗೊಂಡ ನಿಯೋಗ ಸಿಎಂ ಜೊತೆ ಚರ್ಚೆ ನಡೆಸಿತು. 2ಎ ಮೀಸಲಾತಿ ನೀಡುವಂತೆ ಸತತವಾಗಿ ಹೋರಾಟ ಮಾಡಿದರೂ ಸರ್ಕಾರ ಮಣಿದಿಲ್ಲ, ಹಲವು ಬಾರಿ ಡೆಡ್ ಲೈನ್ ನೀಡಿದರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.