ಕರ್ನಾಟಕ

karnataka

ETV Bharat / state

ಮಹದಾಯಿಯ ನೀರು ಬಳಕೆಗೆ ತಕ್ಷಣ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಕೋನರೆಡ್ಡಿ ಆಗ್ರಹ - ಮಹದಾಯಿ ವಿವಾದದ ಇತಿಹಾಸ

ಮಹದಾಯಿ ನ್ಯಾಯಾಧೀಕರಣ 2018ರ ಆಗಸ್ಟ್​ನಲ್ಲಿ ಕರ್ನಾಟಕಕ್ಕೆ 13.50 ಟಿಎಂಸಿ, ಗೋವಾಕ್ಕೆ 24.00 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ. ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ.

ಶಾಸಕ ಕೋನರೆಡ್ಡಿ

By

Published : Sep 13, 2019, 4:25 PM IST

ಬೆಂಗಳೂರು:ಮಹದಾಯಿಯ 13.50 ಟಿಎಂಸಿ ನೀರು ಉಪಯೋಗಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕೆಂದು ಜೆಡಿಎಸ್​ನ ಮಾಜಿ ಶಾಸಕ ಕೋನರೆಡ್ಡಿ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾಧೀಕರಣ 2018ರ ಆಗಸ್ಟ್​ನಲ್ಲಿ ಕರ್ನಾಟಕಕ್ಕೆ 13.50 ಟಿಎಂಸಿ, ಗೋವಾಕ್ಕೆ 24.00 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ. ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋವಾ, ಮಹಾರಾಷ್ಟ್ರ ಸೇರಿದಂತೆ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಮಹಾದಾಯಿ ವಿಚಾರದಲ್ಲಿ ಗೋವಾ ಹಾಗೂ ಮಹಾರಾಷ್ಟ್ರ ಮುಖಂಡರು ಸುಳ್ಳು ಹೇಳುತ್ತಿದ್ದಾರೆ. ಹೀಗೆ ಸುಳ್ಳು ಏಕೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಬಿಜೆಪಿಯವರು ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದಿದ್ದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ನಾವು ಮಹದಾಯಿ ನೀರು ಕುಡಿಯಲೇಬೇಕು ಎನ್ನುವ ತೀರ್ಮಾನ ಮಾಡಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

ಇದುವರೆಗೂ ರಾಜ್ಯಕ್ಕೆ 13.50 ಟಿಎಂಸಿ ನೀರು ಸಿಗುತ್ತಿಲ್ಲ. ರಾಜ್ಯಕ್ಕೆ ನೀರು‌ ಸಿಗಬೇಕಾದರೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೆ.14 ರಂದು ಮೂರು ರಾಜ್ಯಗಳ ಸಿಎಂಗಳ ಸಭೆ ಕರೆಯಲಾಗಿದೆ ಎಂದಿದ್ದಾರೆ. ಆದರೆ, ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥದ ಪ್ರಶ್ನೆಯೇ ಇಲ್ಲ ಎಂದು ಗೋವಾ ಸಿಎಂ ಹೇಳಿದ್ದಾರೆ ಇಂತಹ ಗೊಂದಲ ಏಕೆ ? ಕೂಡಲೇ ಈ ಗೊಂದಲ ಬಗೆಹರಿಸಿ ರಾಜ್ಯಕ್ಕೆ ನೀರು ದೊರಕುವ ಹಾಗೆ ಮಾಡಬೇಕೆಂದು ಒತ್ತಾಯಿಸಿದರು.

ಮನೀಷ್ ಮುದ್ಗಿಲ್ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ. ಅವರು ಸಾಲ ಮನ್ನಾ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಆ ಯೋಜನೆ ಪೂರ್ಣ ಪ್ರಮಾಣದಲ್ಲಿ ಆಗುವವರೆಗೂ ಆದೇ ಇಲಾಖೆಯಲ್ಲಿ ಅವರನ್ನು ಮುಂದುವರಿಯುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಕೋನರೆಡ್ಡಿ ಆಗ್ರಹಿಸಿದರು.

ಈ ಹಿಂದೆ ಮಾಜಿ ಕೇಂದ್ರ ಸಚಿವರಾಗಿದ್ದ ದಿ.ಅನಂತ ಕುಮಾರ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಿದ್ದರು. ಆದರೆ, ಈಗ ಬಿಜೆಪಿ ಮುಖಂಡರು ರಾಜ್ಯದ ವಿಷಯಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ನೆರೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರಾಜ್ಯಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಸರ್ವ ಪಕ್ಷ ನಿಯೋಗವನ್ನು ಕೇಂದ್ರದ ಬಳಿಗೆ ಕರೆದೊಯ್ಯಲು ಅವರು ಒತ್ತಾಯಿಸಿದರು.

ಕೇರಳ, ತಮಿಳುನಾಡಿಗೆ ನೆರೆ ಪರಿಹಾರ ನೀಡಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಹ 100 ಕೋಟಿ ರೂ. ಬಿಡುಗಡೆಗೆ ಪತ್ರ ಬರೆದಿದ್ದಾರೆ. ಆದರೂ ಏನೂ ಪ್ರಯೋಜನವಾಗಿಲ್ಲ. ಬಿಜೆಪಿ ನೂರು ಬಾರಿ ಸುಳ್ಳನ್ನು ಹೇಳಿ ನಿಜವಾಗಿಸುವ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಸಭೆ ಮಾಡಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವರಾದ ಜಿ.ಟಿ. ದೇವೇಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಅವರು ಪಕ್ಷ ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೋನರೆಡ್ಡಿ, ಆ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರು ಕ್ರಮ ಕೈಗೊಳ್ಳುತ್ತಾರೆ. ಎಲ್ಲವೂ ಸರಿಯಾಗುತ್ತದೆ. ಯಾರೂ ಬಿಜೆಪಿಗೆ ಹೋಗುವುದಿಲ್ಲ ಎಂದರು.

ABOUT THE AUTHOR

...view details