ಕರ್ನಾಟಕ

karnataka

ETV Bharat / state

ಕೋಲಾರ, ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದ ಹೈಕಮಾಂಡ್.. ಸಿದ್ದರಾಮಯ್ಯ ಸ್ಪರ್ಧೆ ಕುತೂಹಲ - ಈಟಿವಿ ಭಾರತ ಕನ್ನಡ

ವಿಧಾನಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್​ ಪಕ್ಷವು ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ವಿಪಕ್ಷನಾಯಕ ಸಿದ್ದರಾಮಯ್ಯ ಸ್ಪರ್ಧಿಸಲು ಇಚ್ಛಿಸಿರುವ ಕೋಲಾರ ಮತ್ತು ಬಾದಾಮಿ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

kolar-and-badami-ticket-not-yet-announced-by-congress
ಸಿದ್ದರಾಮಯ್ಯ ಸ್ಪರ್ಧೆ ಆಸೆ ಇನ್ನೂ ಜೀವಂತ : ಕೋಲಾರ, ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದ ಹೈಕಮಾಂಡ್...!

By

Published : Mar 25, 2023, 10:58 AM IST

Updated : Mar 25, 2023, 1:16 PM IST

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಇಚ್ಛಿಸಿದ್ದ ಕೋಲಾರ ಮತ್ತು ಬಾದಾಮಿ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಇಂದು ಘೋಷಣೆ ಮಾಡಿರುವ ಮೊದಲ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿಯ ಹೆಸರನ್ನು ಪ್ರಕಟ ಮಾಡಿಲ್ಲ.

ಈ ಬೆಳವಣಿಗೆಯಿಂದ ಕೋಲಾರ ಮತ್ತು ಬಾದಾಮಿ ವಿಧಾನಸಭೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರು ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಆಸೆ ಇನ್ನೂ ಜೀವಂತವಾಗಿದೆ. ಬಹಳಷ್ಟು ಚರ್ಚೆ, ಸಮಾಲೋಚನೆ, ಅಭಿಪ್ರಾಯ ಸಂಗ್ರಹ, ಸಮೀಕ್ಷಾ ವರದಿ ಹಾಗೂ ಹೈಕಮಾಂಡ್ ಸಲಹೆ ಆಧರಿಸಿ ಸಿದ್ದರಾಮಯ್ಯನವರು ಕೊನೆಯ ಕ್ಷಣದಲ್ಲಿ ತಮ್ಮ ಪುತ್ರನ ಕ್ಷೇತ್ರ ವರುಣದಿಂದ ಸ್ಪರ್ಧೆ ಮಾಡುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯನವರ ಆಯ್ಕೆಯಂತೆ ಕಾಂಗ್ರೆಸ್ ಹೈಕಮಾಂಡ್ ವರುಣದಿಂದಲೇ ಸ್ಪರ್ಧೆ ಮಾಡಲು ಅವಕಾಶ ನೀಡಿ ಟಿಕೆಟ್​ನ್ನು ಘೋಷಣೆ ಮಾಡಿದೆ.

ವರುಣ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸುತ್ತಿದ್ದ ಸಿದ್ದರಾಮಯ್ಯನವರ ಮಗ ಯತೀಂದ್ರ ಅವರಿಗೆ ಟಿಕೆಟ್ ಅನ್ನು ಘೋಷಣೆ ಮಾಡಲಾಗಿಲ್ಲ. ಈ ಕ್ಷೇತ್ರದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಯತೀಂದ್ರ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟನ್ನು ನೀಡಿಲ್ಲ. ಯತೀಂದ್ರ ಅವರಿಗೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಸುವ ಆಲೋಚನೆಯನ್ನು ಪಕ್ಷ ಹೊಂದಿದೆ ಎಂದು ಹೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೊದಲು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ ವಿಧಾನಸಭೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಸಂಬಂಧ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯ ವೇಳೆ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಕೋಲಾರ ಕ್ಷೇತ್ರದಲ್ಲಿ ಗೆಲುವು ಕಷ್ಟಕರ ಎಂದು ಸಮೀಕ್ಷಾ ವರದಿಯಲ್ಲಿ ತಿಳಿದು ಬಂದಿದೆ. ಹೆಚ್ಚಿನ ರಿಸ್ಕ್ ಇರುವ ಕೋಲಾರ ಕ್ಷೇತ್ರ ಹೊರತುಪಡಿಸಿ ಬೇರೆ ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ಹೇಳಲಾಗಿತ್ತು.

ಪಕ್ಷದ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ನಿಲುವನ್ನು ಬದಲಾಯಿಸಿ ಅಂತಿಮವಾಗಿ ತಮ್ಮ ಪುತ್ರರಾದ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ತವರು ಕ್ಷೇತ್ರ ವರುಣದಿಂದ ಸ್ಪರ್ಧೆ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯನವರು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಮುಖ್ಯಮಂತ್ರಿ ಆಗಿದ್ದಾಗ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ನಂತರ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರುಣ ಕ್ಷೇತ್ರವನ್ನು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ತಾವು ಪಕ್ಕದ ಕ್ಷೇತ್ರ ಚಾಮುಂಡೇಶ್ವರಿಯಲಿ ಸ್ಪರ್ಧೆ ಮಾಡಿದ್ದರು. ಜೆಡಿಎಸ್​ನ ಅಭ್ಯರ್ಥಿ ಜಿ ಟಿ ದೇವೇಗೌಡರ ಪ್ರಬಲ ಪೈಪೋಟಿ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ತೀರ್ಮಾನ ತೆಗೆದುಕೊಂಡರು.

2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರಿಂದ ಪರಾಭವಗೊಂಡರು. ಎರಡನೇ ಕ್ಷೇತ್ರ ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಸೋಲಿಸಿ ವಿಧಾನಸಭೆಯನ್ನ ಪ್ರವೇಶ ಮಾಡಿದ್ದರು.

ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ದು ಒಲವು:ಕಾಂಗ್ರೆಸ್ ಶಾಸಕ ಪಕ್ಷದ ನಾಯಕ ಸಿದ್ದರಾಮಯ್ಯನವರು ಅಂತಿಮ ಕ್ಷಣದಲ್ಲಿ ವರುಣ ವಿಧಾನಸಭಾ ಕ್ಷೇತ್ರವನ್ನು ಸ್ಪರ್ಧೆಗಾಗಿ ಆಯ್ಕೆ ಮಾಡಿಕೊಂಡಿದ್ದರೂ ತಾವು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಅಭಿಲಾಷೆಯನ್ನು ಇನ್ನೂ ಹೊಂದಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಹೈಕಮಾಂಡ್ ಕೋಲಾರದಲ್ಲಿ ಅವಕಾಶ ನೀಡದಿದ್ದರೆ ಪ್ರಸ್ತುತ ಶಾಸಕರಾಗಿ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಒಲವನ್ನು ಸಿದ್ದರಾಮಯ್ಯನವರು ಇಟ್ಟುಕೊಂಡಿದ್ದಾರೆಂದು ತಿಳಿದು ಬಂದಿದೆ.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದಂತೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೂ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯನವರು ಹೈಕಮಾಂಡ್ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ. ವರುಣ ಜೊತೆಗೆ ಕೋಲಾರ ಅಥವಾ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಅಪೇಕ್ಷೆಯನ್ನು ಸಿದ್ದರಾಮಯ್ಯನವರು ಹೈಕಮಾಂಡ್ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದ ಮೊದಲ 124 ಜನರ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಲು ಇಚ್ಚಿಸಿದ್ದ ಕೋಲಾರ ಹಾಗೂ ಬಾದಾಮಿ ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದರೆ ಸಿದ್ದರಾಮಯ್ಯನವರು ಕೊನೆಯ ಕ್ಷಣದಲ್ಲಿ ವರುಣ ಹೊರತುಪಡಿಸಿ ಈ ಎರಡೂ ಕ್ಷೇತ್ರಗಳಿಂದಲೂ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ :ಕರ್ನಾಟಕ ಚುನಾವಣೆ 2023: ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯ ವರುಣ, ಡಿಕೆಶಿಗೆ ಕನಕಪುರ

Last Updated : Mar 25, 2023, 1:16 PM IST

ABOUT THE AUTHOR

...view details