ಬೆಂಗಳೂರು: ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ವಾಪಸ್ ಪಡೆಯದೇ ಇದ್ದಲ್ಲಿ ದೆಹಲಿ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಮುತ್ತಿಗೆಗೆ ಮುಂದಾಗಬೇಕಾಗಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಓದಿ: ಕೋಡಿಹಳ್ಳಿ ನೇತೃತ್ವದಲ್ಲಿ ಸ್ವಾತಂತ್ರ್ಯಉದ್ಯಾನದ ಕಡೆ ಹೊರಟ ರೈತರು
ಫ್ರೀಡಂ ಪಾರ್ಕ್ನಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ರೈತರು ಜಗತ್ತಿನ ಇತಿಹಾಸದಲ್ಲಿ ನಡೆಯದೇ ಇರುವ ದಾಖಲೆಯನ್ನು ಮಾಡಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಮೂಲಕ ದೆಹಲಿ ಪ್ರವೇಶ ಮಾಡಿದ್ದಾರೆ.
ಇಷ್ಟೊಂದು ಜನ ದೇಶದ ಇತಿಹಾಸದ ಚಳವಳಿಯಲ್ಲಿ ಭಾಗಿಯಾಗಿರಲಿಲ್ಲ. ಈ ಬಾರಿ ಒಂದಷ್ಟು ಅಹಿತಕರ ಘಟನೆ ನಡೆದಿದೆ. ಆದರೆ ಇದಕ್ಕೆ ಕಾರಣವೂ ಇದೆ. ರೈತರ ತಾಳ್ಮೆಗೆ ಇತಿಮಿರಿ ಇರಲಿದೆ. ಆ ತಾಳ್ಮೆಯ ಕಟ್ಟೆ ಒಡೆದ ಮೇಲೆ ಈ ರೀತಿ ಅನಿವಾರ್ಯ ಸನ್ನಿವೇಶವನ್ನು ಕಾಲವೇ ನಿರ್ಧರಿಸಲಿದೆ ಎನ್ನುವುದಕ್ಕೆ ಇಂದಿನ ರೈತರ ಹೋರಾಟ ಸಾಕ್ಷಿಯಾಗಿದೆ ಎಂದರು.
ರೈತರ ಜೊತೆ 10ನೇ ಸುತ್ತಿನ ಮಾತುಕತೆ ಮುಕ್ತಾಯವಾಗುವ ವೇಳೆ ಕಾಯ್ದೆ ವಾಪಸ್ ಬಿಟ್ಟು ಉಳಿದ ಬಗ್ಗೆ ಮಾತನಾಡೋಣ ಎಂದು ಕೇಂದ್ರ ಸರ್ಕಾರದ ಸಚಿವರು ಹೇಳುತ್ತಾರೆ. ಆದರೆ ನಮ್ಮ ಬೇಡಿಕೆ ಕೂಡ ಅಷ್ಟೇ, ಆ ಮೂರು ಕಾಯ್ದೆ ವಾಪಸ್ ಪಡೆಯಬೇಕು. ನಂತರವೇ ಮಾತುಕತೆ ಎಂದಿದ್ದೆವು. ನಂತರ ಪ್ರಕರಣ ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಕೋರ್ಟ್ ಕಾಯ್ದೆಗಳನ್ನು ತಾತ್ಕಾಲಿಕ ವಾಪಸ್ ಪಡೆಯಲು ಸೂಚನೆ ನೀಡಿದೆ. ಆದರೆ ಶಾಶ್ವತವಾಗಿ ಕಾನೂನು ವಾಪಸ್ ಒಡೆಯಲು ಭಾರತ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಹಾಗಾಗಿ ನಾವು ಚಳುವಳಿ ವಾಪಸ್ ಪಡೆಯಲ್ಲ. ಕಾಯ್ದೆ ವಾಪಸ್ ಪಡೆದಲ್ಲಿ ಮಾತ್ರ ಚಳವಳಿ ವಾಪಸ್ ಪಡೆಯಲಿದ್ದೇವೆ.
13ನೇ ಸುತ್ತಿನ ಮಾತುಕತೆ ವೇಳೆ ಕೇಂದ್ರ ಸರ್ಕಾರ ಎರಡು ವರ್ಷ ಕಾಯ್ದೆ ಜಾರಿಯಾಗಲ್ಲ. ಹೋರಾಟ ವಾಪಸ್ ಪಡೆಯಿರಿ ಎಂದಿತು. ಆದರೆ ಇದಕ್ಕೆ ನಾವು ಒಪ್ಪಿಲ್ಲ. ಧ್ವಜಾರೋಹಣ ನಂತರ ನಮ್ಮ ರೈತ ಗಣರಾಜ್ಯೋತ್ಸವ ಪರೇಡ್ ಆರಂಭದ ಹೇಳಿಕೆ ನೀಡಿದ್ದೆವು. ಅದರಂತೆ ಪರೇಡ್ ಆರಂಭವಾಯಿತು. ಆದರೆ ದೆಹಲಿ ಪರೇಡ್ನಲ್ಲಿ ನಡೆದ ಅಹಿತಕರ ಘಟನೆಗೆ ಪಾಕಿಸ್ತಾನದ ಕುಮ್ಮಕ್ಕಿದೆ. ಯಾವುದೋ ಉಗ್ರಗಾಮಿ ಸಂಘಟನೆ ಕೈವಾಡವಿದೆ ಎನ್ನುತ್ತಾರೆ. ಇದು ಅನ್ನ ತಿನ್ನುವವರು ಹೇಳುವ ಮಾತಾ..? ರೈತರ ಜೀವನ ಹಾಳು ಮಾಡುವ ಕಾನೂನು ತಂದಿದ್ದಾರೆ. ಅದನ್ನು ತೆಗೆಯಿರಿ ಎಂದರೆ ಉಗ್ರಗಾಮಿ, ನಕ್ಸಲ್, ಯಾವುದೋ ರಾಜಕೀಯ ಪಕ್ಷದ ಕುಮ್ಮಕ್ಕಿದೆ ಎನ್ನುತ್ತಾರೆ. ಎಚ್ಚರಿಕೆಯಿಂದ ಮಾತನಾಡಿ, ಗಂಭೀರತೆಯಿಂದ ಮಾತನಾಡಿ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.