ಬೆಂಗಳೂರು:ಸಾರಿಗೆ ನೌಕರರ ಉಚ್ಛಾಟನೆ, ರಾಜೀನಾಮೆ ಶುರುವಾದ ಬೆನ್ನಲ್ಲೇ ಸಾರಿಗೆ ನೌಕರರ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿದರು.
ಲಾಕ್ ಡೌನ್ ವೇಳೆ ನಾನು ವಿಶ್ರಾಂತಿಯಲ್ಲಿದ್ದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ. ಈ ವಿಚಾರ ಹಿಂದೆ ಕೂಡ ಒಮ್ಮೆ ಚರ್ಚೆಯಾಗಿತ್ತು. ಆಗ ಎಲ್ಲರನ್ನು ಕೂರಿಸಿ ಬಗೆಹರಿಸುವ ಕೆಲಸ ಮಾಡಿದ್ದೆ. ಈಗ ಕೂಡ ಇವರಿಗೆ ತಿಳಿಹೇಳುವ ಪ್ರಯತ್ನವನ್ನು ಮಾಡುತ್ತೇನೆ, ಸರಿಯಾಗುತ್ತೆ. ಎಲ್ಲೆ ಮೀರಿ ಹೋಗಲು ಬಿಡೋದಿಲ್ಲ ಎಂದು ತಿಳಿಸಿದರು.
ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ಎಲ್ಲ ಸರ್ಕಾರಗಳಲ್ಲಿ ಜನಶಕ್ತಿ ಅಥವಾ ಕಾರ್ಮಿಕ ಶಕ್ತಿಯನ್ನು ಒಡೆಯುವ ಪ್ರಯತ್ನ ನಡೆಯುತ್ತದೆ. ಆ ನಿಟ್ಟಿನಲ್ಲಿ ಸರ್ಕಾರದ ನಿರಂತರ ಕ್ರಿಯೆ ಇದಾಗಿದ್ದು, ದೊಡ್ಡ ಅಪಾಯವೇನು ಅಲ್ಲ. ಇದನ್ನು ಸರಿ ಮಾಡಬಹುದು ಅಂತ ಅಂದುಕೊಂಡಿದ್ದೇನೆ ಎಂದರು.
ಆನಂದ್ ಉಚ್ಛಾಟನೆ ಬಗ್ಗೆ ಮಾಹಿತಿಯಿಲ್ಲ:
ಆನಂದ್ ಉಚ್ಛಾಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಸಣ್ಣ ಸಣ್ಣ ವಿಚಾರಗಳಿಗೆ ಯಾರನ್ನೋ ವಜಾ ಅಥವಾ ಉಚ್ಚಾಟನೆ ಮಾಡುವುದು, ಪ್ರಜಾಪ್ರಭುತ್ವದಲ್ಲಿ ಸರಿಯಾದ ಮಾರ್ಗವಲ್ಲ. ಉಚ್ಚಾಟನೆ ಮಾಡಲು ಬಲವಾದ ಕಾರಣ ಇರಬೇಕು. ಆದರೆ ಉಚ್ಚಾಟನೆ ಮಾಡುವ ಸಂದರ್ಭ ಇದಲ್ಲ. ನೌಕರರ ಕಷ್ಟವನ್ನ ಬಗೆಹರಿಸುವ ಕೆಲಸ ಈಗ ಆಗಬೇಕು. ಸಾರಿಗೆ ನೌಕರರ ಆಮಾನತ್ತು, ವರ್ಗಾವಣೆ, ವೇತನ ಕಡಿತ ಮುಖ್ಯವಾಗಬೇಕಿತ್ತು. ಈ ಉದ್ದೇಶದಿಂದ ನಾವು ಕೂಡ ಎಲ್ಲೋ ದಾರಿ ತಪ್ಪಿದಂತೆ ಗೊತ್ತಾಗ್ತಿದೆ. ಸ್ವಲ್ಪ ದಿನದಲ್ಲಿ ಎಲ್ಲ ಸರಿ ಮಾಡುತ್ತೇನೆ ಎಂದು ಹೇಳಿದರು.
ಎಲ್ಲ ವಿಷಯಗಳನ್ನು ಬಗೆಹರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತೇನೆ. ಯಾರು ಯಾವ ರೀತಿ ತಪ್ಪು ಮಾಡಿದ್ದಾರೆ ಎನ್ನುವುದರ ಮೇಲೆ ಅವರನ್ನು ಮತ್ತೆ ಕರೆದುಕೊಳ್ಳುವ ಬಗ್ಗೆ ತೀರ್ಮಾನಿಸುತ್ತೇನೆ. ಜೂನ್ 21 ರ ನಂತರ ಈ ಕುರಿತು ಸಂಧಾನ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.