ಬೆಂಗಳೂರು: ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದು ತೀರಾ ಖಂಡನೀಯ. ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ವಿವಾದ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಈಗ ಸಾರಿಗೆ ನೌಕರರ ಮುಷ್ಕರವನ್ನು ದಮನಕಾರಿ ನೀತಿಯ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.
ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಡೆಗಟ್ಟುವ ಉದ್ದೇಶ ಸರ್ಕಾರಕ್ಕೆ ನಿಜಕ್ಕೂ ಇದ್ದಿದ್ದರೆ, ಕೂಡಲೇ ಸಾರಿಗೆ ನೌಕರರ ಜತೆ ಮಾತನಾಡಿ ಮುಷ್ಕರ ಅಂತ್ಯಗೊಳಿಸುತ್ತಿದ್ದರು. ಆದರೆ ಸರ್ಕಾರವು ಹಿಂಬಾಗಿಲಿನಿಂದ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಖಾಸಗೀಕರಣ ಮಾಡುವ ಬಿಜೆಪಿ ಪಕ್ಷದ ಮೂಲ ಆಶಯವನ್ನು ಈ ಮೂಲಕ ಜಾರಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆಮ್ ಆದ್ಮಿ ಪಕ್ಷವು ರಾಜ್ಯ ಸರ್ಕಾರದ ಈ ರೀತಿಯ ಸರ್ವಾಧಿಕಾರಿ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸುತ್ತದೆ. ಇಂತಹ ಸಂವಿಧಾನ ವಿರೋಧಿ ಬಂಧನವನ್ನು ಉಗ್ರ ಹೋರಾಟಗಳ ಮೂಲಕ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದರು.