ಬೆಂಗಳೂರು:ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಆರನೇ ವೇತನ ಆಯೋಗ ಜಾರಿ ಇಲ್ಲ, ಶೇ.8 ರಷ್ಟು ವೇತನ ಕೊಡ್ತೀವಿ ಬಂದು ಕೆಲಸ ಮಾಡಿ ಅನ್ನುತ್ತಿದೆ. ಈ ರೀತಿ ನೌಕರರನ್ನು ಹೆದರಿಸಿ ಬೆದರಿಸಿ ಕೆಲಸ ಮಾಡಿಸಬಾರದು, ತಾರತಮ್ಯ ನೀತಿ ಮುಂದುವರಿಯಬಾರದು ಎಂದು ಸಾರಿಗೆ ನೌಕರರ ಹೋರಾಟ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸರ್ಕಾರಿ ಸಾರಿಗೆಯನ್ನು ಖಾಸಗೀಕರಣ ಮಾಡಿದರೆ ಮುಂದೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಖಾಸಗೀಕರಣ ಮಾಡಲು ಆಗುವುದಿಲ್ಲ, ಅದು ಅಷ್ಟು ಸುಲಭವೂ ಅಲ್ಲ. ಪರ್ಯಾಯವಾಗಿ ಖಾಸಗಿ ಬಸ್ಗಳ ದರ ನಿಗದಿ ಮಾಡಿರಬಹುದು, ಇದನ್ನು ನಾವು ಗಮನಿಸಿದ್ದೇವೆ. ಸರ್ಕಾರ ಒಂದು ವೇಳೆ ದಾರಿ ತಪ್ಪಿದ್ರೆ ನಮ್ಮ ಹೋರಾಟ ಬೇರೆ ರೀತಿಯಲ್ಲಿ ಶುರುವಾಗುತ್ತದೆ. ಕರ್ನಾಟಕದಲ್ಲಿ ಕೃಷಿ, ಸಾರಿಗೆ, ಕೈಗಾರಿಕೆ ಸೇರಿದಂತೆ ಬೇರೆ ಉದ್ದಿಮೆಗಳಲ್ಲಿ ಖಾಸಗಿ ಕಂಪನಿಗಳು ಪ್ರವೇಶಿಸಿದರೆ ಜನ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯವನ್ನು ಖಾಸಗಿಯವರ ಕೈಗೆ ಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮೂಲಕ ಅಪಾಯದ ಕಡೆ ಹೆಜ್ಜೆ ಇಡಲಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೇವಾ ಕ್ಷೇತ್ರ ಕೊಟ್ಟರೆ ಸ್ವಾತಂತ್ರ್ಯ ಹರಣವಾಗುತ್ತದೆ. ಮತ್ತೊಂದು ಸಲ ಕಂಪನಿ ಆಡಳಿತ ಶುರುವಾಗುತ್ತದೆ. ಇದನ್ನು ನಾವು ಸಹಿಸುವುದಿಲ್ಲ. ಇದಕ್ಕಾಗಿ ಪ್ರತಿಭಟನೆಗೆ ಇಳಿಯಲೇಬೇಕಾಗುತ್ತೆ ಎಂದು ತಿಳಿಸಿದರು.
ಯಡಿಯೂರಪ್ಪನವರಿಗೆ ಹೋಳಿಗೆ ತುಪ್ಪದೂಟ, ನೌಕಕರಿಗೆ ವೇತನ ಕಡಿತ :
ಯುಗಾದಿ ಹಬ್ಬ ಹತ್ತಿರ ಬರುತ್ತಿದೆ, ಇತರ ನಿಗಮಗಳ ನೌಕರರಿಗೆ ಹಬ್ಬಕ್ಕಾಗಿ ಬೋನಸ್ ನೀಡಲಾಗುತ್ತಿದೆ. ಆದರೆ, ಸಾರಿಗೆ ನಿಗಮದ ನೌಕರರಿಗೆ ಮಾರ್ಚ್ ತಿಂಗಳ ವೇತನ ಕಡಿತ ಮಾಡುತ್ತಿದ್ದೀರಾ. ಹಾಗಾದರೆ, ಯುಗಾದಿ ಹಬ್ಬ ಮಾಡುವುದು ಹೇಗೆ? ಯಡಿಯೂರಪ್ಪನವರೇ ಮನೆಯಲ್ಲಿ ನೀವು ಯುಗಾದಿಗೆ ಹೋಳಿಗೆ ತುಪ್ಪದ ಊಟ ಮಾಡಿದ ಹಾಗೆ ದುಡಿಯುವ ಜನರು ಕೂಡ ಮಾಡಬೇಕಲ್ವಾ..? ನೌಕಕರಿಗೆ ವೇತನ ಕಡಿತದ ಶಿಕ್ಷೆ ಯಾಕೆ? ಹಿಂದಿನ ಸರ್ಕಾರಕ್ಕೆ ನೀವೇ ಬುದ್ದಿ ಹೇಳಿ, ಈಗ ನಿಮ್ಮ ಸರ್ಕಾರ ಇರುವಾಗ ನೌಕರರ ಮೇಲೆ ಗುಡುಗುತ್ತಿದ್ದೀರಾ, ಇದು ಸರಿನಾ ಎಂದು ಪ್ರಶ್ನೆ ಮಾಡಿದರು.
ಓದಿ : ತಂದೆಗೆ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ, ಬಸ್ಗಳೇ ಇಲ್ಲ: ಮಗಳ ವೇದನೆ
ನಿವೃತ್ತಿ ಹೊಂದಿದ ಚಾಲಕರಿಗೆ ಕೆಲಸಕ್ಕೆ ಬನ್ನಿ ಎಂದು ನೋಟಿಸ್ ಕೊಟ್ಟಿದ್ದೀರಾ. ನಿವೃತ್ತಿಯಾದವರನ್ನು ಕೆಲಸಕ್ಕೆ ಕರೆಯುವುದು ಎಷ್ಟು ಸರಿ? ಸರ್ಕಾರ ಯೋಚನೆ ಮಾಡಬೇಕು. ಕೆಲಸಕ್ಕೆ ಹಾಜರಾಗದವರು ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದೀರಿ. ಈ ರೀತಿ ಅಧಿಕಾರ ಚಲಾಯಿಸುವುದು ಸರಿಯಾದ ಕ್ರಮವಲ್ಲ. ಸಾರಿಗೆ ಇಲಾಖೆಯಲ್ಲಿ ಮಲತಾಯಿ ಧೋರಣೆ ಆಗಬಾರದು. ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ, ಅದು ಬಿಟ್ಟು ವೇತನ ಕೇಳಿದರೆ ಶೋಷಣೆ ಮಾಡುವುದು ಸರಿಯಲ್ಲ ಎಂದರು.
ಶಾಂತಿಯುತ ಹೋರಾಟ ಮುಂದುವರಿಕೆ :ನೌಕರರಚಳವಳಿ ಹತ್ತಿಕ್ಕಲು ಹಲವು ಮಾರ್ಗಗಳ ಮೂಲಕ ಸರ್ಕಾರ ಯೋಚಿಸುತ್ತಿದೆ. ನಾವು ಶಾಂತ ರೀತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ಖಾಸಗಿ ವಾಹನ ಓಡಿಸಿದರೂ ನಾವು ಅಡ್ಡಿಪಡಿಸಿಲ್ಲ. ನಿಲ್ದಾಣಕ್ಕೆ ಬೇರೆ ಬಸ್ ಬಂದಾಗ ಪ್ರತಿಭಟನೆ ಮಾಡಲಿಲ್ಲ. ಹೀಗಿರುವಾಗ, ನಿಮ್ಮದೇ ನಾಗರಿಕರ ಮೇಲೆ ಎಸ್ಮಾ ಜಾರಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ತರಬೇತಿ ಚಾಲಕರಿಗೆ ನೋಟಸ್ :ತರಬೇತಿ ಮುಕ್ತಾಯ ಆಗುವ ಮುನ್ನವೇ ಸ್ಟೇರಿಂಗ್ ಕೊಡ್ತಿರಾ ಎಂದರೆ ಹೇಗೆ? ಜೀವ ಹಾನಿಯಾದರೆ ಯಾರು ಹೊಣೆ? ಈ ರೀತಿಯ ತಪ್ಪು ನಿರ್ಧಾರ ಕೈಗೊಳ್ಳಬಾರದು. ಇದರ ಬದಲು ಮಾತುಕತೆಗೆ ಕರೆದು ಸಮಸ್ಯೆ ಬಗೆಹರಿಸಿ. ವಜಾ ಮಾಡಿದರೆ ತಪ್ಪಾಗುತ್ತದೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದರೆ ಸರ್ಕಾರದ ಮೇಲೆ ನ್ಯಾಯಾಲಯ ಇದೆ, ಅಲ್ಲಿ ಪ್ರಶ್ನೆ ಮಾಡ್ತೀವಿ ಎಂದರು.