ಬೆಂಗಳೂರು: "ರಾಜ್ಯದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೊಡಗನ್ನು ಸ್ವಿಟ್ಜರ್ಲೆಂಡ್ ಅಥವಾ ಕಾಶ್ಮೀರವನ್ನಾಗಿ ಮಾಡಬೇಕಿಲ್ಲ. ಕೊಡಗನ್ನು ಕೊಡಗಾಗಿಯೇ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ.ತಿಮ್ಮಯ್ಯ ಪರ ನಾಗರಾಜ್ ಯಾದವ್ ಕೇಳಿದ ಪ್ರಶ್ನೆಗೆ ಆನಂದ್ ಸಿಂಗ್ ಪರ ಸಚಿವರು ಉತ್ತರಿಸಿದರು.
"ಮೈಸೂರು ಪ್ರವಾಸಿ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸಾರಿಗೆ ಸೌಲಭ್ಯ, ವಸತಿ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪುಸಲು ಆಗುತ್ತಿರುವ ವಿಳಂಬ ತಡೆಗೆ ಕ್ರಮ ಕೈಗೊಂಡು, ತ್ವರಿತವಾಗಿ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡಬೇಕು, ನೀವು ಏನು ಮಾಡಿಲ್ಲ ಅದನ್ನು ನಾವು ಮಾಡುತ್ತಿದ್ದೇವೆ ಅಲ್ಲಿಯವರೇ ಸಿಎಂ ಇದ್ದರೂ ಅಭಿವೃದ್ಧಿ ಮಾಡಿರಲಿಲ್ಲ" ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಟಾಂಗ್ ನೀಡಿದರು. ನಂತರ ಕೊಡಗನ್ನು ಸ್ವಿಟ್ಜರ್ಲೆಂಡ್ ಮಾದರಿ ಅಭಿವೃದ್ಧಿ ಮಾಡಬೇಕು ಎನ್ನುವುದನ್ನು ತಳ್ಳಿಹಾಕಿದ ಸಚಿವರು, "ಕೊಡಗನ್ನು ಸ್ವಿಟ್ಜರ್ಲೆಂಡ್, ಕಾಶ್ಮೀರ ಮಾಡಬೇಕಿಲ್ಲ, ಕೊಡಗನ್ನು ಕೊಡಗನ್ನಾಗಿಯೇ ಮಾಡಬೇಕಿದೆ" ಎಂದರು.
ಕರಾವಳಿ ಪ್ರವಾಸಿ ತಾಣಗಳ ಅಭಿವೃದ್ಧಿ: "ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಮೂಲಸೌಕರ್ಯ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ" ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರ ಅಶ್ವತ್ಥನಾರಾಯಣ್ ಉತ್ತರಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಅಭಿವೃದ್ಧಿ ಕಾರ್ಯ ನಡೆಸಲು ನಿಯಮಗಳೂ ಸರಳೀಕರಣಗೊಂಡಿವೆ ಹಾಗಾಗಿ ಕರಾವಳಿ ಪ್ರದೇಶದ ಪ್ರವಾಸೀತಾಣಗಳ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತದೆ" ಎಂದು ಹೇಳಿದರು.
ಪದೋನ್ನತಿ ಶಿಕ್ಷಕರ ವೇತನ ವಿಚಾರ: "ಪದೋನ್ನತಿ ಪಡೆದ ಶಿಕ್ಷಕರಿಗೆ ವೇತನದಲ್ಲಿ ಅನ್ಯಾಯವಾಗಿರುವುದು ನಿಜ. ಸ್ಟೆಪ್ ಆಫ್ ರೀತಿ ವ್ಯವಸ್ಥೆ ಜಾರಿ ಸೇರಿದಂತೆ ಎಲ್ಲ ಲೋಪ ಸರಿಪಡಿಸುವ ಕುರಿತ ಪರಿಶೀಲನೆ ನಡೆಸಲಾಗುತ್ತದೆ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಎಸ್.ವಿ.ಸಂಕನೂರು ಮತ್ತು ಶಶಿಲ್ ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಬಡ್ತಿ ಪಡೆದ ಶಿಕ್ಷಕರಿಗೆ ವೇತನದಲ್ಲಿ ಅನ್ಯಾಯ ಆಗಿರುವುದು ನಿಜ, ಪದೋನ್ನತ ಪಡೆಯದವರಿಗೆ ಹೆಚ್ಚು ವೇತನ ಸಿಗುತ್ತಿದೆ. ಆದರೆ, ಬಡ್ತಿ ಪಡೆದವರಿಗೆ ಮಾತ್ರ ಕಡಿಮೆ ಇದೆ. ಏಳನೇ ವೇತನ ಆಯೋಗದಲ್ಲಿ ಅದನ್ನು ಸರಿಪಡಿಸಲಾಗುತ್ತದೆ. ಸ್ಟೆಪ್ ಆಫ್ ರೀತಿ ವ್ಯವಸ್ಥೆ ಜಾರಿ ಸೇರಿದಂತೆ ಎಲ್ಲ ಲೋಪ ಸರಿಪಡಿಸುವ ಕುರಿತ ಪರಿಶೀಲನೆ ನಡೆಸಲಾಗುತ್ತದೆ" ಎಂದು ತಿಳಿಸಿದರು.
ಪದೋನ್ನತಿ ನೀಡಲು ವಿವಿ ಸ್ವಾಯತ್ತ:ಕಲಾಪದಲ್ಲಿ ಬಿಜೆಪಿ ಸದಸ್ಯ ತಳವಾರ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಡಾ.ಅಶ್ವತ್ಥನಾರಾಯಣ್, "ವಿವಿಗಳಲ್ಲಿ ಬೋಧಕೇತರ ಸಿಬ್ಬಂದಿ ಪದೋನ್ನತ ಬೇಕಾದ ಕಾಲಕ್ಕೆ ಸಿಗುತ್ತಿಲ್ಲ. 75 ನೇರ ನೇಮಕಾತಿ 25 ಪದೋನ್ನತ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಪದೋನ್ನತಿ ಆಗುವ ಅವಕಾಶ ಬಹಳ ಕಡಿಮೆ ಇದೆ. ಇದನ್ನು ಪರಿಶೀಲನೆ ಮಾಡಿ ಸರಿಪಡಿಸಬೇಕಿದೆ ಎನ್ನುವ ಬೇಡಿಕೆಯನ್ನು ಸದಸ್ಯರು ಇಟ್ಟಿದ್ದಾರೆ, ಆದರೆ ವಿವಿಗಳಿಗೆ ಸಂಪೂರ್ಣ ಸ್ವಾಯತ್ತತೆ ಇದೆ, ಅದರಂತೆ ನೇರ ನೇಮಕಾತಿ, ಪದೋನ್ನತಿ ಕೆಲಸ ಅವರೇ ರೂಪಿಸಿಕೊಳ್ಳಲಿದ್ದಾರೆ. ವಿವಿ ಕಳಿಸುವ ಶಿಫಾರಸು ರಾಜ್ಯಪಾಲರಿಗೆ ಕಳಿಸುತ್ತೇವೆ ಅಷ್ಟೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ, ನೇಮಕಾತಿ, ಪದೋನ್ನತಿಗೆ ಎಲ್ಲ ಅವಕಾಶ ಇದೆ. ವಿವಿಗಳೇ ಅದನ್ನು ಮಾಡುತ್ತಿವೆ" ಎಂದರು.