ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯತೆ ಹೊಂದಿರುವ ಕಾಂಗ್ರೆಸ್ ಪಕ್ಷ, ಸಂಭವನೀಯ ಅಭ್ಯರ್ಥಿ ಟಿ ಬಿ ಜಯಚಂದ್ರ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಎಲ್ಲರ ಮನವೊಲಿಸಲು ಮುಂದಾಗಿದೆ.
ಟಿ ಬಿ ಜಯಚಂದ್ರ ವಿರುದ್ಧ ರೆಬೆಲ್ ಆಗಿರುವ ಕೆ ಎನ್ ರಾಜಣ್ಣ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಸ್ಥಳೀಯವಾಗಿ ಉಭಯ ನಾಯಕರ ಸಂಬಂಧ ಸಾಕಷ್ಟು ಹಳಸಿದೆ. ಈ ಹಿನ್ನೆಲೆ ರಾಜ್ಯ ನಾಯಕರು ಸಮಾಲೋಚಿಸಿ ಇಬ್ಬರ ನಡುವೆ ಸಾಮರಸ್ಯ ತಂದು ಪ್ರಸಕ್ತ ವಿಧಾನಸಭಾ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಪರ ಕಾರ್ಯ ನಿರ್ವಹಿಸುವಂತೆ ಮನವೊಲಿಸಬೇಕಾಗಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ವಿಚಾರವಾಗಿ ಚರ್ಚಿಸಿದ್ದರು. ರಾಜಣ್ಣರನ್ನ ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಲು ತೀರ್ಮಾನಿಸಿದರು. ಇದೇ ಪ್ರಯತ್ನದ ಭಾಗವಾಗಿ ಇಂದು ರಾಜಣ್ಣ ಜೊತೆ ಡಿಕೆಶಿ ಸಮಾಲೋಚಿಸಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಡಿ ಕೆ ಶಿವಕುಮಾರ್ ಅವರ ಆರೋಗ್ಯವನ್ನು ಇದೇ ಸಂದರ್ಭ ವಿಚಾರಿಸಿದ ಕೆ ಎನ್ ರಾಜಣ್ಣ, ತಾವು ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು, ಈ ಸಾರಿಯೂ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.