ಬೆಂಗಳೂರು: ದೇವೇಗೌಡರು ಬಿಡಿ, ದೊಡ್ಡವರು. ಯಾವಾಗಾದ್ರೂ ಅವರು ಹೇಳಿದಂತೆ ನಡೆದಿದ್ದಾರಾ ಎಂದು ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಸಂಬಂಧ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಮಧ್ಯಂತರ ಚುನಾವಣೆ ಯಾರಿಗೆ ಬೇಕ್ರಿ. ಯಾರಪ್ಪನ ದುಡ್ಡು ಅಂತಾ ಪದೇ ಪದೆ ಚುನಾವಣೆ ಮಾಡುವುದು. ದೇವೇಗೌಡರು ಬಿಡಿ, ದೊಡ್ಡವರು. ಯಾವಾಗಾದ್ರೂ ಅವರು ಹೇಳಿದಂತೆ ನಡೆದಿದ್ದಾರಾ?. ಯಡಿಯೂರಪ್ಪ ಸಿಎಂ ಮಾಡುತ್ತೇನೆ ಅಂದ್ರು. ಆ ಮೇಲೆ ಬಾಂಡ್ ಪೇಪರ್ ಅಂದ್ರು. ಈಗ ಚುನಾವಣೆಗೆ ಮಹಾತ್ಮ ಗಾಂಧಿ ಬಂದು ನಿಂತರೂ ಸೋಲುತ್ತಾರೆ. ಚುನಾವಣೆ ರೀತಿ ಬದಲಾಗಿದೆ ಎಂದು ವಿವರಿಸಿದರು.
ಮೋದಿಗೆ ವೋಟ್ ಹಾಕಿ, ಕೆಲಸ ನಮಗೆ ಕೇಳ್ತೀರಾ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಆ ರೀತಿ ಹೇಳಿರುವುದು ಸರಿಯಲ್ಲ. ಇವರು ಮುಖ್ಯಮಂತ್ರಿ ಆಗಿರುವುದು ರಾಜ್ಯ ಜನತೆಗೆ. ಹಾಗೆಲ್ಲಾ ಮಾತಾಡುವುದು ಸರಿಯಲ್ಲ. ಇವರು ಇರುವುದೇ 37 ಶಾಸಕರು. ಇವರಿಗೆ ಜನಾಭಿಪ್ರಾಯ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ, ಮೋದಿಗೆ ವೋಟ್ ಹಾಕ್ತೀರಿ ಅಂತಾ ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರೀ ಸಿದ್ದರಾಮಯ್ಯ ಆ ರೀತಿ ಹೇಳಲಿಕ್ಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಕೇವಲ ಕುರುಬರಿಗೆ ಮಾತ್ರ ಅಕ್ಕಿ ಕೊಟ್ಟಿದ್ದಾ?. ಸಾಲಮನ್ನಾ ಮಾಡಿದ್ದು ಒಂದೇ ಸಮುದಾಯಕ್ಕಾ? ಅದರ ಸೌಲಭ್ಯ ಮೇಲ್ಜಾತಿಯವರೇ ಹೆಚ್ಚು ಪಡೆದಿದ್ದಾರೆ. ಹಳ್ಳಿಕಟ್ಟೆ ಮೇಲೆ ಕುಳಿತು ಮಾತಾಡಿದ್ರೂ ಅದಕ್ಕೆ ಬೆಲೆ ಇರುತ್ತದೆ. ಬಾಂಡ್ ಪೇಪರ್ ಮೇಲೆ ನಮಗೆ ನಂಬಿಕೆ ಇಲ್ಲ. ಮಾತಿನ ಮೇಲೆ ನಂಬಿಕೆ ಇರಬೇಕು ಎಂದು ಸೂಚ್ಯವಾಗಿ ಹೇಳಿದರು.