ಬೆಂಗಳೂರು:ರಾಜ್ಯದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಕ್ಷೇತ್ರದ ರೈತರು ಬಿಬಿಎಂಪಿಯಲ್ಲಿ ಎದುರು ಪ್ರತಿಭಟನೆ ನಡೆಸಿದರು.
ರಾಮನಗರದ ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ಬಿಬಿಎಂಪಿ ಕಸ ತುಂಬಲು 42 ಎಕರೆ ಜಾಗ ಖರೀದಿಸಿ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ನೀಡಿದೆ ಎಂದು ಆರೋಪಿಸಿ ರೈತರು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.
ಸ್ಥಳೀಯ ರೈತರ ಗಮನಕ್ಕೆ ತರದೇ 42 ಎಕರೆ ಜಾಗ ಟಿಡಿಆರ್ ಗೆ ಮಾರಾಟ ಮಾಡಿ ಬಿಲ್ಡರ್ಗೆ ಲಾಭ ಮಾಡಿಕೊಡಲಾಗಿದೆ. ಹಿಂದೊಮ್ಮೆ ಪ್ರತಿಭಟನೆ ಮಾಡಿ, ಟಿಡಿಆರ್ ನೀಡುವುದನ್ನು ನಿಲ್ಲಿಸಿದ್ದೆವು. ಆದ್ರೆ ಇದೀಗ ಮತ್ತೆ ಹಿಂಬಾಗಿಲ ಮೂಲಕ ಟೆಂಡರ್ ಪಡೆಯಲು ಖಾಸಗಿ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ತವರೂರು ರೈತರಿಂದ ಪ್ರತಿಭಟನೆ ರಾಮನಗರದಲ್ಲಿ ಕಸ ಹಾಕುವುದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಈಗಾಗಲೇ ವೃಷಭಾವತಿ ಕೊಳಚೆ ನೀರಿನಿಂದ ಜನ ಹೈರಾಣಾಗಿದ್ದಾರೆ. ಭೂಭರ್ತಿಯನ್ನೂ ಮಾಡುವುದರಿಂದ ಸುತ್ತಮುತ್ತಲಿನ ಸಾರ್ವಜನಿಕರು, ದೇವಸ್ಥಾನ, ಶಾಲೆಗಳು, ಹಾಸ್ಟೆಲ್ ಮತ್ತು ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಈ ಕೂಡಲೇ ಕಸ ಹಾಕುವ ನಿರ್ಧಾರವನ್ನು ಪಾಲಿಕೆ ಕೈಬಿಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಸದ್ಯ ಕಸ ರಾಮನಗರಕ್ಕೆ ವರ್ಗಾವಣೆ ಮಾಡುವ ಯಾವುದೇ ಪ್ರಸ್ತಾವನೆ ಬಿಬಿಎಂಪಿ ಮುಂದೆ ಇಲ್ಲ. ಅಲ್ಲದೆ ಟಿಡಿಆರ್ ನೀಡಿರುವ ವಿಚಾರ ಐದು ವರ್ಷಕ್ಕೂ ಹಳೆಯದ್ದಾಗಿದ್ದರಿಂದ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ತಿಳಿದಿಕೊಂಡು ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಮನವಿ ಮಾಡಿದರು.