ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಕೆಆರ್ಎಸ್ ಬಿರುಕು ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಾಕ್ಸಮರ ಸದ್ದು ಮಾಡ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾರ್ಯಕರ್ತನ ತಲೆಗೆ ಬಾರಿಸಿದ ವಿಷಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಕಾರ್ಯಕರ್ತನಿಗೆ ಹೊಡೆಯುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರೌಡಿ ಲಕ್ಷಣ ತೋರುತ್ತಿದ್ದಾರೆ ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಡಿಕೆಶಿ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆಯೂ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು ಎಂದು ಕಿಡಿಕಾರಿದೆ.
ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ?, ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿಕೆಶಿ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದೆ.