ಬೆಂಗಳೂರು : ರಸೆಲ್ ಮಾರುಕಟ್ಟೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆಯ ಅಪೂರ್ಣ ಕೆಲಸಗಳಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಹೈಕೋರ್ಟ್ ನಿರ್ದೇಶನದ ಮೇಲೆ ಫುಟ್ಪಾತ್ ಒತ್ತುವರಿ, ರಸ್ತೆ ಒತ್ತುವರಿಗಳನ್ನೇನೋ ಪಾಲಿಕೆ ತೆರವು ಮಾಡಿತು, ಆದರೆ ಪಾಲಿಕೆ ಸಿಬ್ಬಂದಿ ಮಾಡಿರುವ ಹಲವು ಎಡವಟ್ಟುಗಳಿಂದ ಶಿವಾಜಿನಗರ, ರಸೆಲ್ ಮಾರುಕಟ್ಟೆ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಹಿಡಿಶಾಪ ಹಾಕುತ್ತಿದ್ದಾರೆ.
ರಸೆಲ್ ಮಾರುಕಟ್ಟೆ, ಚಾಂದಿನಿ ಚೌಕ್ ರಸ್ತೆ, ಶಿವಾಜಿ ರಸ್ತೆಗಳಲ್ಲಿ ಒತ್ತುವರಿ ಮಾಡಿದ್ದ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡಿದೆ. ಆದರೆ ನೆಲಸಮ ಮಾಡುವಾಗ ಇದ್ದ ಚುರುಕುತನ, ಅದರ ಕಟ್ಟಡ ತ್ಯಾಜ್ಯ ತೆರವು ಮಾಡುವಾಗ ಇಲ್ಲದಂತಾಗಿದೆ. ಹೀಗಾಗಿ ಇರುವ ಅಂಗಡಿಗಳ ಮುಂದೆಯೂ ಕಟ್ಟಡದ ಕಲ್ಲು, ಮಣ್ಣಿನ ರಾಶಿ-ರಾಶಿ ಬಿದ್ದಿರುವುದಿಂದ ಜನರ ಓಡಾಟವೇ ಇಲ್ಲದಂತಾಗಿದೆ. ಇದರಿಂದ ಅಂಗಡಿ ಮಳಿಗೆಗಳಿಗೆ ಗ್ರಾಹಕರು ಬರುತ್ತಿಲ್ಲ. ನಷ್ಟ ಅನುಭವಿಸ್ತಿದ್ದೇವೆ ಎಂದು ಅಂಗಡಿ ಮಾಲೀಕರು ಅಳಲು ತೋರಿದ್ದಾರೆ.
ಶಿವಾಜಿನಗರ ರಸೆಲ್ ಮಾರುಕಟ್ಟೆ ಅಷ್ಟೇ ಅಲ್ಲದೆ ಒತ್ತುವರಿ ತೆರವು ವೇಳೆ ಕೈಗೆ ಸಿಕ್ಕಿದ ಅಂಗಡಿ ಸಾಮಾನುಗಳು, ಗ್ಯಾಸ್ ಸಿಲಿಂಡರ್ಗಳನ್ನು ಎತ್ತಿಕೊಂಡು ಹೋಗಲಾಗಿದೆ ಎಂದು ದೂರುತ್ತಿದ್ದಾರೆ. ಯಾವುದೇ ನೋಟಿಸ್ ನೀಡದೇ, ಏಕಾಏಕಿ ಅಂಗಡಿಗಳನ್ನು ನೆಲಸಮ ಮಾಡಿ ಹೀನಕೃತ್ಯ ಮಾಡಿದ್ದಾರೆಂದು ಅಂಗಡಿ ಮಾಲೀಕರು ಪಾಲಿಕೆ ಕೆಲಸಕ್ಕೆ ಧಿಕ್ಕಾರ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಎಷ್ಟೋ ವರ್ಷಗಳ ಬಳಿಕ, ಹೈಕೋರ್ಟ್ ಆದೇಶದಿಂದ ಎಚ್ಚರವಾದ ಪಾಲಿಕೆ ತೆರವು ಕಾರ್ಯಾಚರಣೆ ನಡೆಸಿದೆ. ಆದರೆ ಅಷ್ಟೇ ಶೀಘ್ರವಾಗಿ ಕಟ್ಟಡ ತ್ಯಾಜ್ಯಗಳನ್ನೂ ತೆರವು ಮಾಡಿ, ಉಳಿದಿರುವ ಅಂಗಡಿ ಮಾಲೀಕರ ಕೆಲಸಕ್ಕೆ ಅನುವು ಮಾಡಿಕೊಡಬೇಕಿದೆ.