ಬೆಂಗಳೂರು : ನಂದಿನಿ ತುಪ್ಪ ಉತ್ಕೃಷ್ಟ ಗುಣಮಟ್ಟದ ತುಪ್ಪವಾಗಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ತಿರುಪತಿ ತಿರುಮಲ ಟ್ರಸ್ಟ್ನ ಟೆಂಡರ್ನಲ್ಲಿ ನಾವು ಭಾಗವಹಿಸಿಲ್ಲ. ತಿರುಪತಿಗೆ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತ ಕುರಿತು ಭೀಮಾ ನಾಯ್ಕ್ ಮಾಹಿತಿ ನೀಡಿದ್ದಾರೆ.
ಬಹಳ ವರ್ಷಗಳಿಂದ ಕೆಎಂಎಫ್ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲಾಗುತ್ತಿತ್ತು. ನಮ್ಮ ನಂದಿನಿ ತುಪ್ಪದಿಂದಲೇ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಾಗುತ್ತಿತ್ತು. ಆದರೆ ಈಗ ಒಂದು ವರ್ಷದಿಂದ ನಂದಿನಿ ತುಪ್ಪದ ನೇರ ಖರೀದಿ ಬದಲು ತುಪ್ಪ ಖರೀದಿಗೆ ಟೆಂಡರ್ ಕರೆಯುತ್ತಿದ್ದಾರೆ. ಟೆಂಡರ್ನಲ್ಲಿ ಭಾಗವಹಿಸುವಂತೆ ತಿರುಪತಿ ತಿರುಮಲ ಟ್ರಸ್ಟ್ ನವರು ನಮಗೂ ಆಹ್ವಾನ ನೀಡಿದ್ದರು. ಆದರೆ ನಾವು ಟೆಂಡರ್ ನಲ್ಲಿ ಭಾಗವಹಿಸಲಿಲ್ಲ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ಗೆ ಈಗ ನಾವು ನಂದಿನಿ ತುಪ್ಪವನ್ನು ಪೂರೈಕೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಬೆಲೆಯಲ್ಲಿ ನಾವು ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ. ಯಾರು ಕಡಿಮೆ ದರ ನಮೂದು ಮಾಡಿರುತ್ತಾರೋ ಅವರಿಗೆ ಟೆಂಡರ್ ಸಿಗಲಿದೆ. ಹಾಗಾಗಿ ನಮ್ಮದು ಫಿಕ್ಸೆಡ್ ದರ, ಕಡಿಮೆ ದರ ನಮೂದು ಮಾಡಲು ಸಾಧ್ಯವಿಲ್ಲ. ಅದರಿಂದ ನಾವು ಟೆಂಡರ್ ನಲ್ಲಿ ಭಾಗವಹಿಸಲಿಲ್ಲ. ಈಗ ಅವರು ಯಾರಿಗೆ ಟೆಂಡರ್ ಕೊಟ್ಟಿದ್ದಾರೋ, ಯಾರು ತುಪ್ಪ ಸರಬರಾಜು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ನಂದಿನಿ ತುಪ್ಪ ಸರಬರಾಜು ಮಾಡುತ್ತಿಲ್ಲ ಎಂದು ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ.