ಬೆಂಗಳೂರು: ನಗರದ ಕೆ.ಜೆ ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ), ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ವಿಚಾರಣೆಗೆ ಪರಿಗಣಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತನ್ನ ವಿರುದ್ಧ ಯುಎಪಿಎ ಕಾಯಿದೆಯಡಿ ಸಂಜ್ಞೆ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಹಾಗೂ ಪ್ರಕರಣದ 25ನೇ ಆರೋಪಿಯಾಗಿರುವ ಮೊಹಮ್ಮದ್ ಶರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಅರ್ಜಿ ತಿರಸ್ಕರಿಸಿದೆ. ಅಲ್ಲದೇ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಸ್ಫೋಟಕಗಳು ಮತ್ತು ದಹಿಸಬಲ್ಲ ವಸ್ತುಗಳಿಂದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಅಥವಾ ನಷ್ಟ ಉಂಟು ಮಾಡಲಾಗಿದೆ. ಶಾಂತಿ ಭಂಗ ಉಂಟು ಮಾಡಲಾಗಿದೆ ಎಂಬ ಆರೋಪವಿದೆ. ಇದು ಯುಎಪಿಎ ಸೆಕ್ಷನ್ 15ರ ವ್ಯಾಪ್ತಿಗೆ ಒಳಪಡಲಿದೆ. ಪ್ರಸ್ತುತ ಪ್ರಕರಣ ವಿಚಾರಣಾ ಹಂತದಲ್ಲಿದೆ ಈ ಸಂದರ್ಭದಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ತಿಳಿಸುವುದರಿಂದ ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣದ ಮೇಲೆ ಪೂರ್ವಾಗ್ರಹ ಉಂಟಾಗಲಿದೆ. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರವಾದ ಮಂಡಿಸಿದ್ದ ವಕೀಲರು, ಎನ್ಐಎ ಕಾಯಿದೆ ಅಡಿ ಬರುವಂಥ ಯಾವುದೇ ತೆರನಾದ ಆರೋಪಗಳು ಅರ್ಜಿದಾರರ ವಿರುದ್ಧ ಇಲ್ಲ. ಹೀಗಾಗಿ ಕಾಯಿದೆ ಅಡಿ ಅವರ ವಿರುದ್ಧ ಯಾವುದೇ ಆರೋಪ ಮಾಡಲಾಗದು. ಐಪಿಸಿ ಅಡಿ ಆರೋಪಗಳನ್ನು ಅರ್ಜಿದಾರರ ವಿರುದ್ಧ ಮಾಡಬಹುದಾಗಿದ್ದು, ವ್ಯಾಪ್ತಿ ಹೊಂದಿದ ನ್ಯಾಯಾಲಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಬಹುದಾಗಿದೆ. ಮ್ಯಾಜಿಸ್ಟ್ರೇಟ್ ಅಥವಾ ಸತ್ರ ನ್ಯಾಯಾಧೀಶರು ವಿಚಾರಣೆ ನಡೆಸಬಹುದಾಗಿದೆ. ಎನ್ಐಎ ನ್ಯಾಯಾಲಯ ವಿಚಾರಣೆ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಈ ನೆಲೆಯಲ್ಲಿ ಎನ್ಐಎ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾ ಮಾಡಬೇಕು ಎದು ವಾದಿಸಿದ್ದರು.