ಬೆಂಗಳೂರು:ಉಪ ಚುನಾವಣೆ ಫಲಿತಾಂಶ ಬಳಿಕ ಮತ್ತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಉಪ ಚುನಾವಣೆ ನಂತರ ಅಸ್ತಿತ್ವ ಕಳೆದುಕೊಳ್ಳಲಿದೆ. ನಂತರ ಹೊಸ ಸರ್ಕಾರ ರಚಿಸುವ ತೀರ್ಮಾನ ಪಕ್ಷದ ಹೈಕಮಾಂಡ್ ಮಾಡಲಿದೆ ಎಂದರು.
ಭೈರತಿ ಬಸವರಾಜು ಸೇರಿ ಯಾರೇ ಸವಾಲು ಹಾಕಿದರೂ ನಾನು ಸ್ವೀಕರಿಸಲ್ಲ. ಈಗಾಗಲೇ ಕೆ.ಆರ್.ಪುರಂ ಮತದಾರ ಬಸವರಾಜುರನ್ನ ಸೋಲಿಸೋ ತೀರ್ಮಾನ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಭೈರತಿ ಬಸವರಾಜ್ ಈ ಬಾರಿ ಕೆ.ಆರ್.ಪುರಂನಲ್ಲಿ ಶೇ. 100ರಷ್ಟು ಸೋಲುತ್ತಾರೆ ಎಂದಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ನಾನು ಗೃಹ ಸಚಿವನಾಗಿದ್ದವನು. ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಬೇಕು. ಇದೇ ರೀತಿಯಲ್ಲಿ ಪೊಲೀಸ್ ದೌರ್ಜನ್ಯ ಮುಂದುವರೆದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.