ಬೆಂಗಳೂರು/ಬೆಳಗಾವಿ:ರಾಜ್ಯ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ನಿಧನ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬೆಂಗಳೂರಿನ ಸಿಎಂ ನಿವಾಸಕ್ಕೆ ಹಿರಿಯ ಗೋವಿಂದ ಕಾರಜೋಳ ಭೇಟಿ ನೀಡಿ, ಕೆಲಕಾಲ ಮಾತುಕತೆ ನಡೆಸಿದರು. ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಕಿತ್ತೂರು ಉತ್ಸವದ ಕುರಿತು ಸಮಾಲೋಚಿಸಿದರು. ಅಂತಿಮವಾಗಿ ನಾಳೆಯಿಂದ ಉತ್ಸವ ಆಚರಣೆಗೆ ನಿರ್ಧರಿಸಲಾಯಿತು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕಾರಜೋಳ, ಆನಂದ ಮಾಮನಿ ನಿಧನ ಅತ್ಯಂತ ನೋವು ತಂದಿದೆ. ಅವರು ಅಪರೂಪದ, ಸರಳ, ಸಜ್ಜನ ರಾಜಕಾರಣಿ. ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುವ, ಜನಪರ, ರೈತಪರ ಕಳಕಳಿ ಇದ್ದ ಅವರ ಅಗಲಿಕೆಯಿಂದ ನಾಡಿಗೆ, ಸವದತ್ತಿ ಜನತೆಗೆ ತುಂಬಲಾಗದ ನಷ್ಟವುಂಟಾಗಿದೆ. ಇಂದು ನಡೆಸಬೇಕಿದ್ದ ಕಿತ್ತೂರು ಉತ್ಸವವನ್ನು ಮುಂದೂಡಿಕೆ ಮಾಡಲಾಗಿದೆ. ಜನ ಸಂಕಲ್ಪ ಯಾತ್ರೆಯನ್ನೂ ಮುಂದೂಡಲಾಗಿದೆ ಎಂದರು.