ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ನಿಮಿತ್ತ ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ವೇಳೆ, ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಕಳೆದ 50 ವರ್ಷ ಹಿಂದೆ ಶಿಕಾರಿಪುರದಲ್ಲಿ ಎಪಿಎಂಸಿಯಲ್ಲಿ ಧರಣಿ ಕೂತಿದ್ದೆ. ರೈತ ಬೆಳೆದಂತಹ ಬೆಳೆಗೆ ಎಲ್ಲಿ ಒಳ್ಳೆಯ ಬೆಲೆ ಸಿಗುತ್ತೆ ಅಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ಸಿಗಬೇಕು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಒಂದು ವಾರ ಸತ್ಯಾಗ್ರಹ ಮಾಡಿದ್ದೆ ಎಂದು ಸ್ಮರಿಸಿದರು.
ಇಂದು ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾನು ಸಿಎಂ ಆಗುವ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಎಲ್ಲಿ ಬೇಕಾದರೂ ತಾನು ಬೆಳೆದ ಬೆಳೆ ಮಾರಾಟ ಮಾಡುವ ಅವಕಾಶ ಪ್ರಧಾನಿ ಮೋದಿ ನೀಡಿದರು. ಆದರೆ, ಇದನ್ನು ಕೆಲ ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ. ಶೇ 99ರಷ್ಟು ರೈತರು ಇದನ್ನು ಸ್ವಾಗತಿಸಿದ್ದಾರೆ. ರೈತರ ಕಣ್ಣೀರನ್ನು ಒರೆಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ, ರೈತ ನೆಮ್ಮದಿಯಿಂದ ಗೌರವ, ಸ್ವಾಭಿಮಾನದಿಂದ ಬಾಳಲು ನಾವು ಸಿದ್ಧರಿದ್ದೇವೆ ಎಂಬ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸ್ವಾತಂತ್ರ್ಯದ ಬಳಿಕ ಯಾವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಮಾಡಿದ ದೇಶದ ಹಿರಿಯರ ಮನಸ್ಸಿಗೆ ನೆಮ್ಮದಿ ಕೊಡುವ ರಾಜಕೀಯ ನಡೆದಿಲ್ಲ. ದೇಶ ಮೊದಲು ಎಂಬ ಶಬ್ದಕ್ಕೆ ಅರ್ಥ ಬರುವಂಥ ರೀತಿಯಲ್ಲಿ ದೇಶದಲ್ಲಿ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ನವರು ದೇಶವನ್ನು ಲೂಟಿ ಮಾಡುವ ಕೆಲಸ ಮಾಡಿದರು ಎಂದು ಕಿಡಿ ಕಾರಿದರು.