ಬೆಂಗಳೂರು: ಕಾರಿಗಾಗಿ ನೀಡಿದ್ದ ಹಣವನ್ನು ಸಕಾಲಕ್ಕೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಯುವಕನನ್ನು ಹಾಡಹಾಗಲೇ ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಹಣ ವಾಪಸ್ ನೀಡುವಂತೆ ಒತ್ತಾಯಿಸಿ ವ್ಯಕ್ತಿ ಅಪಹರಣ: ಐವರ ಬಂಧನ
ಕುಡಿದ ನಶೆಯಲ್ಲಿ ಕಿರಣ್ ಎಂಬಾತನನ್ನು ಅಪಹರಿಸಿ ಹಿಗ್ಗಾಮುಗ್ಗ ಥಳಿಸಿದ್ದ ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ದಿಲೀಪ್, ಲೊಕೇಶ್, ವಿನಯ್ ಕುಮಾರ್, ಗಣೇಶ್, ದೀಪಕ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ. ಅಪಹರಣಕ್ಕೆ ಒಳಗಾಗಿದ್ದ ಕಿರಣ್ ಕುಮಾರ್ ಎಂಬುವವರು ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದರು. ಕೊರೊನಾ ಸಂಕಷ್ಟ ಹಿನ್ನೆಲೆ ತಮ್ಮ ಬಳಿಯಿದ್ದ ಮಾರುತಿ ಸ್ವಿಫ್ಟ್ ಕಾರನ್ನು ಆರೋಪಿ ದೀಪಕ್ ಎಂಬುವರಿಗೆ ಮಾರಾಟ ಮಾಡಲು ಮುಂದಾಗಿದ್ದರು. 4.25 ಲಕ್ಷ ರೂ.ಗೆ ವ್ಯಾಪಾರ ಮುಗಿಸಿ 35 ಸಾವಿರ ಮುಂಗಡವಾಗಿ ಕಿರಣ್ಗೆ ದೀಪಕ್ ಹಣ ನೀಡಿದ್ದ.
ಎರಡು ದಿನದ ಬಳಿಕ ಆರೋಪಿ ಕರೆ ಮಾಡಿ ನಾನು ಕಾರು ಖರೀದಿ ಮಾಡುವುದಿಲ್ಲ. ಕೊಟ್ಟಿದ್ದ ಮುಂಗಡ ಹಣ ವಾಪಸ್ ನೀಡುವಂತೆ ತಾಕೀತು ಮಾಡಿದ್ದಾನೆ. ಮುಂಗಡ ಹಣ ಖರ್ಚಾಗಿದ್ದು, ಹಣ ಹೊಂದಿಸಿ ಕೊಡುವುದಾಗಿ ಕಿರಣ್ ಹೇಳಿದ್ದಾರೆ. ಮಾತು ಕೇಳಿಸಿಕೊಳ್ಳದ ಆರೋಪಿ ಕಿರಣ್ ಜುಲೈ 28ರ ಮಧ್ಯಾಹ್ನ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಸಹಚರರೊಂದಿಗೆ ಬಂದು ಹೊಡೆದು ಬಲವಂತವಾಗಿ ಕಾರಿನಲ್ಲಿ ಅಪಹರಿಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು.