ಬೆಂಗಳೂರು: ನಿನ್ನೆ ರಾತ್ರಿ ಯುವಕನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಬಂಡೆಪಾಳ್ಯ ಪೊಲೀಸರು ಚೇಸ್ ಮಾಡಿ ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಅಪಹರಣಕ್ಕೆ ಕಿಡ್ನಾಪ್ ಆಗಿರುವ ಯುವಕ ಮತ್ತು ಆರೋಪಿಗಳ ನಡುವೆ ಇದ್ದ ಹಣಕಾಸಿನ ವ್ಯವಹಾರವೇ ಕಾರಣ ಎಂಬುದು ತಿಳಿದು ಬಂದಿದೆ. ಎರಡು ವರ್ಷಗಳ ಹಿಂದೆ ಖರೀದಿಸಿದ್ದ ಬೈಕ್ಗೆ ಹಣ ಕೊಡದೇ ಸತಾಯಿಸಿದ ಹಿನ್ನೆಲೆ ಬಿರಿಯಾನಿ ತಿನ್ನೋಣ ಎಂದು ಕರೆಯಿಸಿಕೊಂಡು ತೌಹಿದ್ ಎಂಬಾತನನ್ನ ಅಪಹರಿಸಿದ ಆರೋಪದಡಿ ಗೋಪಿ ಎಂಬುವನನ್ನ ಬಂಧಿಸಿ ವಿಚಾರಣೆಗೊಳಪಡಿಸಿರುವ ಪೊಲೀಸರು ಹಣ ಕೊಡದಿದ್ದಕ್ಕೆ ಕಿಡ್ನಾಪ್ ಮಾಡಿದ್ದಾರೆ ಎಂಬ ವಿಚಾರವನ್ನು ಬಾಯಿಬಿಡಿಸಿದ್ದಾರೆ.
ಡ್ರೈವಿಂಗ್ ಕೆಲಸ ಮಾಡುತ್ತಿದ್ದ ತೌಹಿದ್ 2021ರಲ್ಲಿ ಆರೋಪಿಗಳ ಬಳಿ ಕೆಟಿಎಂ ಬೈಕ್ ಅನ್ನು 45 ಸಾವಿರಕ್ಕೆ ಖರೀದಿಸಿದ್ದ. ಒಪ್ಪಂದದಂತೆ ಮುಂಗಡವಾಗಿ 5 ಸಾವಿರ ನೀಡಿ ಉಳಿದ ಹಣವನ್ನ ಮುಂದಿನ ದಿನಗಳಲ್ಲಿ ಆರೋಪಿಗಳಿಗೆ ಕೊಡುವುದಾಗಿ ಭರವಸೆ ನೀಡಿದ್ದ. ಎರಡು ವರ್ಷವಾದರೂ ಹಣ ಕೊಡದ ಪರಿಣಾಮ ಬೈಕ್ ದಾಖಲಾತಿಯನ್ನು ಆರೋಪಿಗಳಿಗೆ ಕೊಟ್ಟಿರಲಿಲ್ಲ. ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದರಿಂದ ಕಳೆದ ವಾರ ಯಶವಂತಪುರ ಪೊಲೀಸರು ತಡೆದಿದ್ದರು.
ತಪಾಸಣೆ ನಡೆಸಿದಾಗ ಬೈಕ್ ಬೇರೆಯವರ ಹೆಸರಿನಲ್ಲಿರುವುದು ಕಂಡು ಪೊಲೀಸರು ಸೀಜ್ ಮಾಡಿದ್ದರು. ಬೈಕ್ ಮಾರಾಟ ಮಾಡಿದ್ದ ಆರೋಪಿಗಳಿಗೆ ಪೋನ್ ಮಾಡಿ ದಾಖಲಾತಿ ನೀಡುವಂತೆ ಒತ್ತಾಯಿಸಿದ್ದ. ಹಣ ಕೊಡದೇ ಡಾಕ್ಯುಮೆಂಟ್ ಕೇಳುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದ ಆರೋಪಿಗಳು ಮೂರು ದಿನಗಳ ಹಿಂದೆ ಮಂಗಮ್ಮನಪಾಳ್ಯ ಬಳಿ ಹೋಟೆಲ್ಗೆ ಬಿರಿಯಾನಿ ತಿನ್ನೋಣ ಎಂದು ಕರೆಯಿಸಿಕೊಂಡು ಕಾರಿನಲ್ಲಿ ಆರೋಪಿಗಳು ಅಪಹರಿಸಿದ್ದಾರೆ. ಎರಡು ದಿನಗಳ ಮಂಗಮ್ಮನಪಾಳ್ಯದಲ್ಲಿ ರೂಮ್ ನಲ್ಲಿ ಕೂಡಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
2 ಕಿ ಲೋ ಮೀಟರ್ ಚೇಸ್ ಮಾಡಿ ಯುವಕನನ್ನ ರಕ್ಷಿಸಿದ್ದ ಆಡುಗೋಡಿ ಪೊಲೀಸರು.. ಯುವಕನನ್ನ ಅಪಹರಿಸಿ ಕಾರಿನಲ್ಲಿ ತಡರಾತ್ರಿ ಕರೆದೊಯ್ಯುತ್ತಿದ್ದ ಅಪಹರಣಕಾರರ ಕಾರನ್ನು 2 ಕಿಲೋ ಮೀಟರ್ ಚೇಸ್ ಮಾಡಿ ಯುವಕನನ್ನು ರಕ್ಷಿಸಿ ಆರೋಪಿಯನ್ನು ಆಡುಗೋಡಿ ಪೊಲೀಸರು ಹಿಡಿದಿದ್ದರು. ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ತೌಹಿದ್ ಕಿಡ್ನಾಪ್ ಮಾಡಿದ್ದರು. ಅಪಹರಣವಾದ ಸ್ಥಳದ ಆಧಾರದ ಮೇರೆಗೆ ಆರೋಪಿಯನ್ನು ಬಂಡೆಪಾಳ್ಯ ಪೊಲೀಸರಿಗೆ ಒಪ್ಪಿಸಲಾಗಿತ್ತು.