ಬೆಂಗಳೂರು:ಕಳ್ಳತನ, ಅಪಹರಣದ ಇನ್ನಿತರ ಅಪರಾಧಕ್ಕೆ ಸಂಬಂಧಿಸಿದಂತೆ ದೂರುಗಳು ಬಂದ್ರೆ ಅವುಗಳನ್ನು ದಾಖಲಿಸಿಕೊಂಡು ತಕ್ಷಣ ಕ್ರಮ ಕೈಗೊಳ್ಳುವುದು ಪೊಲೀಸರ ಕೆಲಸ. ಆದ್ರೆ ಇಲ್ಲಿ ಪೊಲೀಸರೇ ಕಿಡ್ನಾಪರ್ಸ್ ಆಗಿದ್ದಾರೆ. ಇಂತಹದೊಂದು ವಿಚಿತ್ರ ಆರೋಪ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.
ಹೌದು, ನಗರದಲ್ಲಿ ಶಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಆರೋಪದಡಿ ಇಬ್ಬರು ಪೊಲೀಸರು ಸಿಲುಕಿಕೊಂಡಿದ್ದಾರೆ. ಪ್ರಕರಣ ಭೇದಿಸುವವರೆಗೂ ಬಾಗಲೂರು ಪೊಲೀಸರಿಗೆ ಆರೋಪಿಗಳು ಪೊಲೀಸರೆಂದು ಗೊತ್ತಿರಲಿಲ್ಲ. ಪ್ರಕರಣ ಭೇದಿಸಿದ ಬಳಿಕ ಆರೋಪಿ ಪಿಎಸ್ಐ ಮತ್ತು ಹೆಡ್ ಕಾನ್ಸ್ಟೇಬಲ್ ಎಂಬುದು ತಿಳಿದು ಬಂದಿದೆ.
ಏನಿದು ಪ್ರಕರಣ: ಶನಿವಾರ ಹುಲಿ ಉಗುರು, ಚರ್ಮವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾರತಹಳ್ಳಿ ಪೊಲೀಸರು ಕರೆದೊಯ್ದಿದ್ದರು. ಆತನ ವಿರುದ್ಧ ಪ್ರಕರಣ ದಾಖಲಿಸದೇ ಮತ್ತು ಪೊಲೀಸ್ ಠಾಣೆಗೆ ಕರೆದೊಯ್ಯದೇ ಬೇರೆ ಕಡೆ ಆರೋಪಿಯನ್ನು ಬಚ್ಚಿಟ್ಟಿದ್ದರು. ನಂತರ ಆರೋಪಿಯ ಸಂಬಂಧಿಕರಿಗೆ ಕರೆ ಮಾಡಿ 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ ಕುಟುಂಬಸ್ಥರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಾಗಲೂರು ಪೊಲೀಸರು ಕಿಡ್ನಾಪ್ ಮಾಡಿದವರ ಪತ್ತೆಗೆ ಜಾಲ ಬೀಸಿದ್ದರು.
ಬಾಗಲೂರು ಪೊಲೀಸರಿಗೆ ತನಿಖೆ ವೇಳೆ ಕಿಡ್ನಾಪ್ ಮಾಡಿದ್ದವರು ಮಾರತಹಳ್ಳಿ ಠಾಣೆ ಪಿಎಸ್ಐ ರಂಗೇಶ್ ಮತ್ತು ಹೆಡ್ ಕಾನ್ಸ್ಟೇಬಲ್ ಹರೀಶ್ ಎಂಬುದು ತಿಳಿದು ಬಂದಿದೆ. ಪ್ರಕರಣವೊಂದರ ಸಂಬಂಧ ಆರೋಪಿಯನ್ನ ಇಬ್ಬರು ಪೊಲೀಸರು ಕರೆದೊಯ್ದಿದ್ದರು. ಈ ವೇಳೆ ಪಿಎಸ್ಐ ರಂಗೇಶ್ ಆರೋಪಿ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಅವರ ಕಡೆಯವರಿಗೆ ಕರೆ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರೇ ಕಿಡ್ನಾಪ್ ಮಾಡಿದ್ದಾರೆ ಎಂಬುದರ ಬಗ್ಗೆ ಕಮಿಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ ರವಾನಿಸಲಾಗಿತ್ತು.