ಬೆಂಗಳೂರು : ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಶ್ರೀಮಂತ ಕುಟುಂಬದ ಯುವಕನನ್ನು ಅಪಹರಿಸಿ, 2 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದ ನಾಲ್ವರು ಆರೋಪಿಗಳನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಪಹಾದ್, ಜಬೀವುಲ್ಲಾ, ಸಲ್ಮಾನ್ ಹಾಗೂ ತೌಹೀದ್ ಪಾಷಾ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿರುವ ತೌಫೀಕ್, ಗೌತಮ್, ಕಿರಣ್ ಹಾಗೂ ತೌಹೀದ್ ಪಾಷಾ ತಲೆಮರೆಸಿಕೊಂಡಿದ್ದಾರೆ.
ಬೈರತಿ ಕ್ರಾಸ್ ನಿವಾಸಿಯಾದ ಅಬ್ದುಲ್ ಪಹಾದ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಂದ ಹಣದಲ್ಲಿ ಜೀವನ ನಡೆಸಲು ಕಷ್ಟವಾಗಿತ್ತು. ಹೀಗಾಗಿ ಸುಲಭವಾಗಿ ಹಣ ಮಾಡಲು ಶ್ರೀಮಂತರ ಮಕ್ಕಳನ್ನು ಅಪಹರಿಸಿ ಒತ್ತೆಯಾಳು ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಟರೆ, ಪೋಷಕರು ಹಣ ಕೊಡುತ್ತಾರೆ ಎಂದು ಭಾವಿಸಿದ್ದ. ಕೃತ್ಯವೆಸಗಲು ತನ್ನ ಸಹಚರರ ನೆರವು ಕೇಳಿದ್ದ. ಹಣದಾಸೆಗಾಗಿ ಉಳಿದ ಆರೋಪಿಗಳು ಅಪಹರಣ ಪ್ರಕರಣದಲ್ಲಿ ಪಾಲ್ಗೊಂಡಿದ್ದರು.
ಅಪಹರಣ ಮಾಡಲು ಒಂದು ವಾರದಿಂದ ಸಂಚು:ಶ್ರೀಮಂತರ ಮಕ್ಕಳನ್ನು ಅಪಹರಿಸಲು ಸಂಚು ರೂಪಿಸಿದ್ದ ಗ್ಯಾಂಗ್, ನರ್ಸಿಂಗ್ ಕಾಲೇಜು ನಡೆಸುತ್ತಿದ್ದ ವ್ಯಕ್ತಿಯ ಮಗ ಅರಾಫತ್ ಎಂಬಾತನನ್ನು ಅಪಹರಿಸಿದರೆ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಭಾವಿಸಿತ್ತು. ಇದಕ್ಕಾಗಿ ಯುವಕನ ಚಲನವಲನಗಳ ಬಗ್ಗೆ ನಿಗಾವಹಿಸಿತ್ತು.
ಮಾ. 25ರಂದು ಮಧ್ಯಾಹ್ನ ಯುವಕ ಬೈಕ್ನಲ್ಲಿ ಹೋಗುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಯುವತಿಯನ್ನು ಚೂಡಾಯಿಸಿದ್ದೀಯಾ ಎಂದು ಪ್ರಶ್ನಿಸುವ ಸೋಗಿನಲ್ಲಿ ಅರಾಫತ್ ಅನ್ನು ಅಪಹರಿಸಿದ್ದರು. ಕೆಲ ಹೊತ್ತಿನ ಬಳಿಕ ಆತನ ತಂದೆಗೆ ಕರೆ ಮಾಡಿ ನಿನ್ನ ಮಗನನ್ನು ಅಪಹರಿಸಿದದ್ದೇವೆ. ಮಗ ಬೇಕಾದರೆ 2 ಕೋಟಿ ಹಣ ನೀಡಬೇಕು, ಇಲ್ಲದಿದ್ದರೆ ಆತನ ಕೈ-ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ನೀವು ಎಲ್ಲಿ ಹೋಗುತ್ತೀರಿ ಎಂಬುವುದರ ಬಗ್ಗೆ ನಾವು ವಾಚ್ ಮಾಡುತ್ತಿದ್ದೇವೆ. ಈ ವಿಚಾರವನ್ನು ಪೊಲೀಸರಿಗೆ ಹಾಗೂ ಇತರರಿಗೆ ತಿಳಿಸಿದರೆ ನಿನ್ನ ಮಗನ ಕೈ ಕಾಲು ಕತ್ತರಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು.
ಇದರಿಂದ ಆತಂಕಕ್ಕೆ ಒಳಗಾದ ಯುವಕನ ತಂದೆ, ಕೆ.ಜಿ ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ಸ್ಪೆಕ್ಟರ್ ಸಂತೋಷ್ ಸ್ಥಳಕ್ಕೆ ಬಂದ ಪರಿಶೀಲನೆ ನಡೆಸಿ, ಬಾಣಸವಾಡಿ ಎಸಿಪಿ ಎನ್.ಬಿ ಸಕ್ರಿ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು.
ಏಳು ಗಂಟೆಯಲ್ಲಿ ಅಪಹರಣಕಾರರ ಬಂಧನ:ಅಪಹರಣವಾದ ಯುವಕ ಮತ್ತು ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿಯ ಯರಪ್ಪನ ಹಳ್ಳಿ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ದೂರು ದಾಖಲಾದ 7 ಗಂಟೆಯೊಳಗೆ ಅಪಹರಣಕಾರರನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ.
ಬಂಧಿತರು ಹೆಚ್ಚಿನ ಸಾಲ ಮಾಡಿಕೊಂಡಿದ್ದು, ಹಣದ ಅವಶ್ಯಕತೆ ಇದ್ದಿದ್ದರಿಂದ ಸುಲಭವಾಗಿ ಹಣಗಳಿಸುವ ಬಗ್ಗೆ ಒಂದು ವಾರದ ಹಿಂದೆಯೇ ಒಟ್ಟಾಗಿ ಸೇರಿ ಮಕ್ಕಳನ್ನು ಅಪಹರಣ ಮಾಡುವ ಯೋಜನೆ ರೂಪಿಸಿದ್ದರು. ಎರಡು ದಿನಗಳ ಹಿಂದೆ ಅಪಹರಣ ನಡೆಸಲು ಹೋಗಿ ವಿಫಲರಾಗಿದ್ದರು ಎಂದು ತಿಳಿದು ಬಂದಿದೆ.
ಅಪಹರಣಕ್ಕಾಗಿ ಒಎಲ್ಕ್ಸ್ನಲ್ಲಿ ಕಾರು ಖರೀದಿ :ಯುವಕನ ಅಪಹರಣಕ್ಕಾಗಿ ಆರೋಪಿಗಳು ಒಎಲ್ಎಕ್ಸ್ನಲ್ಲಿ ಮಾರುತಿ 800 ಕಾರನ್ನು ಖರೀದಿ ಮಾಡಿದ್ದರು. ಬೆಂಗಳೂರಿನ ಕೆ.ಜಿ ಹಳ್ಳಿಯಿಂದ ಕಾರಿನಲ್ಲಿ ಯುವಕನನ್ನು ಅಪಹರಿಸಿದ್ದ ಆರೋಪಿಗಳು ನಗರದಾದ್ಯಂತ ಸುತ್ತಾಡಿಸಿ, ನಂತರ ಆವಲಹಳ್ಳಿ ಬಳಿಯ ಯರಪ್ಪನಹಳ್ಳಿಯಲ್ಲಿ ಕಾರನ್ನು ಪಾರ್ಕ್ ಮಾಡಿದ್ದರು. ಅಪಹರಣ ನಡೆದ ತಕ್ಷಣ ಯುವಕನ ತಂದೆ ಕೆ.ಜಿ ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿಗಳ ಪೋನ್ ಕಾಲ್ ಹಾಗೂ ಸಿಸಿಟಿವಿ ದೃಶ್ಯ ಆಧರಿಸಿ ಗುರುವಾರ ರಾತ್ರಿ ವೇಳೆಗೆ ಪೊಲೀಸರು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಸದ್ಯ, ಪ್ರಕರಣ ಸಂಬಂಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ, ಕೊಲೆಯತ್ನ ದೂರು ದಾಖಲಾಗಿದೆ. ನಾಲ್ವರನ್ನು ಬಂಧಿಸಿರುವ ಪೊಲೀಸರು ನಾಪತ್ತೆಯಾಗಿರುವ ನಾಲ್ವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.