ಬೆಂಗಳೂರು : ಅಪಹರಣ ಪ್ರಕರಣವೊಂದರಲ್ಲಿ ಬಂಧಿಸಲು ಹೋಗಿದ್ದ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಚಾಮರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಇವರ ವಿರುದ್ಧ ವ್ಯಕ್ತಿವೋರ್ವನನ್ನು ಅಪಹರಿಸಿ, ಹಣಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:ಬೆಂಗಳೂರು ಅವಿನ್ಯೂ ರಸ್ತೆಯ ಎಂ.ಆರ್.ಆರ್ ಲೈನ್ ನಿವಾಸಿ ಸತೀಶ್ ಬೋಹ್ರಾ ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿತ್ತು. ಅಪಹರಣಕ್ಕೆ ಒಳಗಾಗಿದ್ದವ ಬೋಹ್ರಾ ಫ್ಯಾಬ್ರಿಕೇಷನ್ ಎಂಬ ಸ್ಟೀಲ್ ಅಂಗಡಿ ಮಾಲೀಕನಾಗಿದ್ದು, ಸ್ಟೀಲ್ ಅಂಗಡಿಯಲ್ಲಿ ದಿನವೊಂದಕ್ಕೆ ಸುಮಾರು ಒಂದೂವರೆ ಲಕ್ಷ ರೂಪಾಯಿ ವಹಿವಾಟು ನಡೆಯುತಿತ್ತು. ಕಳೆದ ಜುಲೈ 15 ರಂದು ಅಪಹರಣಕಾರರು ಸತೀಶ್ ಬೋಹ್ರಾನನ್ನು ಆಪಹರಿಸಿ 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದರು.
ಹಣ ಕೊಡಲಿಲ್ಲ ಅಂದರೆ ಜೀವ ತೆಗೆಯುವುದಾಗಿ ಸತೀಶ್ ಮನೆಯವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಸತೀಶ್ ತಂದೆ ಮಾಂಗೀಲಾಲ್ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಪಡೆದು ತನಿಖೆಗಿಳಿದ ಪೊಲೀಸರು ಸತೀಶ್ ಮನೆಯವರಿಂದಲೇ ಅಪಹರಣಕಾರರ ಬಳಿ ಮಾತನಾಡಿಸಿದ್ದರು. ಈ ವೇಳೆ 20 ಲಕ್ಷಕ್ಕೆ ಬದಲಾಗಿ 15 ಲಕ್ಷ ಕೊಡುವುದಾಗಿ ಒಪ್ಪಿಸಿ, ಮಫ್ತಿಯಲ್ಲಿ ಆರೋಪಿಗಳು ಹೇಳಿದ ಜಾಗಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಹೇಳಿದಂತೆ 15 ಲಕ್ಷ ರೂಪಾಯಿ ಹಣವನ್ನು ರಸ್ತೆಯಲ್ಲಿಟ್ಟು ಕಾಯುತ್ತಿದ್ದ ಪೊಲೀಸರನ್ನೇ ವಂಚಿಸಿ ದುಡ್ಡನ್ನು ತೆಗೆದುಕೊಂಡು ಬೋಹ್ರಾನನ್ನು ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಎಲ್ಲವನ್ನು ಕಣ್ಣಾರೆ ನೋಡುತ್ತಿದ್ದ ಪೊಲೀಸರು ಆರೋಪಿಗಳನ್ನ ಹಿಡಿಯುವಲ್ಲಿ ವಿಫಲರಾಗಿದ್ದರು. ಇದೀಗ ಪ್ರಕರಣವನ್ನ ಭೇದಿಸಿರುವ ಚಾಮರಾಜಪೇಟೆ ಪೊಲೀಸರು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಪಹರಣಕಾರರ ಬಂಧನ ಕುರಿತು ಪೊಲೀಸರಿಂದ ಮಾಹಿತಿ ಆರೋಪಿಗಳ ಪೈಕಿ ಅಕ್ಬರ್ ಎಂಬಾತ ಇಡೀ ಅಪಹರಣ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗ್ತಿದೆ. ಈತ ಒಂದು ಕಾಲಕ್ಕೆ ಬೋಹ್ರಾನ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೋಹ್ರಾ ಅಂಗಡಿಯಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಆತ, ತನ್ನ ಇತರ ಸ್ನೇಹಿತರ ಸಹಾಯದಿಂದ ಅಪಹರಣ ಮಾಡಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ತಂಡ ಪ್ರಕರಣ ದಾಖಲಾಗಿ 10 ದಿನಗಳಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.