ಬೆಂಗಳೂರು: ಕೆಂಪೇಗೌಡನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ಡ್ರಗ್ಸ್ ಕೇಸ್ನಲ್ಲಿ ಬಂಧನವಾದ ಸುನೀಶ್ ಹೆಗ್ಡೆ ಮೇಲೆ ಮತ್ತೊಂದು ಕೇಸ್ ದಾಖಲು ಆಗಿದೆ. ಸದ್ಯ ಜಯನಗರ ಪೊಲೀಸರು ಎಫ್ಐಆರ್ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.
ಸಿಸಿಬಿಯಿಂದ ಈಗಾಗಲೇ ಬಂಧಿತನಾದ ಪ್ರತಿಷ್ಠಿತ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಸ್ನೇಹಿತನನ್ನೇ ಜಯನಗರ ಬಳಿ ಇರುವ ಮನೆಗೆ ನುಗ್ಗಿ ಸುನೀಶ್ ಆ್ಯಂಡ್ ಗ್ಯಾಂಗ್ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ. ಶ್ರೀಕಿಯ ಆತ್ಮೀಯ ಸ್ನೇಹಿತನಾಗಿದ್ದ ಶಶಾಂಕನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಶ್ರೀಕಿಯ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ವೆಬ್ಸೈಟ್, ಗೇಮ್ ಆ್ಯಪ್, ಸರ್ಕಾರಿ ಆ್ಯಪ್ಗಳನ್ನು ಹ್ಯಾಕ್ ಮಾಡಿಕೊಡುವ ಕೆಲಸ ಮಾಡ್ತಿದ್ದ ಶ್ರೀಕಿ. ಸುನೀಶ್ ಹೆಗ್ಡೆಗೂ ಹ್ಯಾಕ್ ಮಾಡಿಕೊಡುವುದಾಗಿ 50 ಲಕ್ಷ ಹಣವನ್ನು ಶ್ರೀಕಿ ಪಡೆದಿದ್ದ. ಆದರೆ ಆ್ಯಪ್ಗಳನ್ನು ಹ್ಯಾಕ್ ಮಾಡಿಕೊಡದೆ ಶ್ರೀಕಿ ತಲೆಮರಿಸಿಕೊಂಡಿದ್ದ. ಹೀಗಾಗಿ ಶ್ರೀಕಿಯನ್ನು ಶಶಾಂಕನೇ ಅಡಗಿಸಿಟ್ಟಿದ್ದಾನೆ ಎಂದು ಅಕ್ಟೋಬರ್ 1 ರಂದು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದನು.