ಬೆಂಗಳೂರು : ಸಾಲ ಪಡೆದುಕೊಂಡಿದ್ದ ಹಣವನ್ನು ಮರಳಿ ನೀಡಲು ಸತಾಯಿಸುತ್ತಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಒಂಬತ್ತು ತಿಂಗಳ ನಂತರ ಬೆಳಕಿಗೆ ಬಂದಿದೆ. ಈ ಸಂಬಂಧ ಐವರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನೂರಿನ ನಿವಾಸಿ ಶರತ್ ಎಂಬವರನ್ನು ಕೊಲೆ ಮಾಡಿದ ಆರೋಪದಡಿ, ಶರತ್ ಕುಮಾರ್, ಚಲಪತಿಗೌಡ, ಶ್ರೀಧರ್, ಧನುಷ್ ಸೇರಿ ಐವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಮತ್ತೆ ಮೂವರು ಭಾಗಿಯಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಯುವಕನಿಗೆ ಹಲ್ಲೆ ನಡೆಸಿದ ವಿಡಿಯೋ ವೈರಲ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯುವಕನೋರ್ವನನ್ನು ಅರೆಬೆತ್ತಲೆಗೊಳಿಸಿ ಹಗ್ಗದಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಹಾಗೂ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಗಮನಿಸಿದ್ದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಕೊತ್ತನೂರು ನಿವಾಸಿ ಶರಣ್ ಎಂಬಾತನನ್ನು ಕಳೆದ ಮಾರ್ಚ್ 21ರಂದು ಬನಶಂಕರಿ ಬಸ್ ನಿಲ್ದಾಣದಿಂದ ಆರೋಪಿಗಳು ಕಾರಿನಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಇನ್ನು ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಶರತ್ನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ಶರತ್ ಎಸ್ಸಿ-ಎಸ್ಟಿ ಯೋಜನೆಯಡಿ ಸರ್ಕಾರದಿಂದ ಸಿಗುವ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಹೇಳಿಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ. ಈತನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಮತ್ತೊಂದೆಡೆ ಆರೋಪಿ ಶರತ್ ಕುಮಾರ್ ತಂದೆ ಚಲಪತಿಗೌಡ ಚಿಕ್ಕಬಳ್ಳಾಪುರದಲ್ಲಿ ಕರವೇ ಅಧ್ಯಕ್ಷನಾಗಿದ್ದ. ಅಲ್ಲದೆ ಪ್ರಿಂಟಿಂಗ್ ಪ್ರೆಸ್ ವೊಂದರ ಮಾಲೀಕನಾಗಿದ್ದಾನೆ. ಫೈನಾನ್ಸ್ ವ್ಯವಹಾರವೂ ನಡೆಸುತ್ತಿದ್ದ ಮುಖಂಡನ ಮಗ ಶರತ್ ಕುಮಾರ್ ಕಳೆದ ವರ್ಷ ಮೃತನಿಗೆ 20 ಲಕ್ಷ ಸಾಲ ಕೊಟ್ಟಿದ್ದ ಎನ್ನಲಾಗಿದೆ. ಕೊಟ್ಟಿದ್ದ ಹಣವನ್ನು ನೀಡಲು ಸತಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಅಪಹರಿಸಿ ಹಣ ನೀಡುವಂತೆ ಆರೋಪಿ ಶರತ್ ಕುಮಾರ್ ಪೀಡಿಸಿದ್ದ. ಕೆಲವೇ ದಿನಗಳಲ್ಲಿ ಹಣ ಕೊಡುವುದಾಗಿ ಹೇಳಿದ್ದ ಮೃತ ಶರತ್, ನುಡಿದಂತೆ ನಡೆದುಕೊಳ್ಳದಿದ್ದರಿಂದ ಮಾರ್ಚ್ 23ರಂದು ಆರೋಪಿಗಳಿಂದ ಬನಶಂಕರಿಯಿಂದ ಮತ್ತೆ ಅಪಹರಿಸಲ್ಪಟ್ಟಿದ್ದ.