ಕರ್ನಾಟಕ

karnataka

ETV Bharat / state

ನ್ಯಾಯಾಲಯದಲ್ಲಿ ಕೆಐಎಡಿಬಿ ಪ್ರಕರಣ: ಜುಲೈ 17ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ್ ಸೂಚನೆ

ಕೆಐಎಡಿಬಿ ನಿವೇಶನ ಹಂಚಿಕೆ ಸಂಬಂಧ 4-5 ವರ್ಷಗಳಲ್ಲಿ 1,748 ಮೊಕದ್ದಮೆಗಳು ದಾಖಲಾಗಿವೆ. ಈ ಪೈಕಿ 921 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

Minister MB Patil held a meeting with the higher officials.
ಉನ್ನತಾಧಿಕಾರಿಗಳೊಂದಿಗೆ ಸಚಿವ ಎಂ ಬಿ ಪಾಟೀಲ್ ಸಭೆ ನಡೆಸಿದರು.

By

Published : Jun 27, 2023, 7:10 PM IST

ಬೆಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಹಂಚಿಕೆಯಾಗಿರುವ ನಿವೇಶನಗಳಿಗೆ ಸಂಬಂಧಿಸಿದ ಕೋರ್ಟ್ ಪ್ರಕರಣಗಳ ಅಂಕಿ ಸಂಖ್ಯೆ, ಅವುಗಳ ಸ್ಥಿತಿಗತಿ, ಸ್ವಾಧೀನ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳು ಇತ್ಯಾದಿ ಬಗ್ಗೆ ಜುಲೈ 17ರ ವೇಳೆಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಖನಿಜ ಭವನದಲ್ಲಿ ಇಂದು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕೆಐಎಡಿಬಿ ನಿವೇಶನ ಹಂಚಿಕೆ ಸಂಬಂಧ ಕಳೆದ 4-5 ವರ್ಷಗಳಲ್ಲಿ 1,748 ಮೊಕದ್ದಮೆಗಳು ದಾಖಲಾಗಿವೆ. ಈ ಪೈಕಿ 921 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. 762 ಪ್ರಕರಣಗಳಲ್ಲಿ ಸರಕಾರದ ಪರ ಆದೇಶ ಬಂದಿದೆ. ಆದರೆ, ಸರಕಾರದ ಹಿತಾಸಕ್ತಿ ಇರುವ ಕೆಲವು ಪ್ರಕರಣಗಳಲ್ಲಿ ನಾವು ಮೇಲ್ಮನವಿಯನ್ನೇ ಸಲ್ಲಿಸಿಲ್ಲ. ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಎಲ್ಲವನ್ನೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಯ ಗಮನಕ್ಕೆ ತಂದು, ಸಲಹೆ ಪಡೆಯಬೇಕು. ಅಡ್ವೊಕೇಟ್‌ ಜನರಲ್ ಅವರ ಅಭಿಪ್ರಾಯವನ್ನೂ ಕೇಳಬೇಕು ಎಂದು ತಿಳಿಸಿದರು.

ಕೋಲಾರದ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ 10 ವರ್ಷಗಳ ಹಿಂದೆಯೇ 92 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದರೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಇದು ಈಗ ಕಗ್ಗಂಟಾಗಿದೆ. ಇದರಲ್ಲಿ ಕೆಲವರು ಅಧಿಸೂಚನೆಯ ಪರವಾಗಿದ್ದರೆ, ಕೆಲವರು ವಿರೋಧಿಸುತ್ತಿದ್ದಾರೆ. ಇದನ್ನು ಸಮಗ್ರವಾಗಿ ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಬಗೆಹರಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರಿಯಾದ ವಿಧಿವಿಧಾನ ಅನುಸರಿಸದೆ ಇರುವುದೇ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗಿವೆ ಎಂದು ಅವರು ಹೇಳಿದರು.

ಕೈಗಾರಿಕೆಗಳ ಬಳಕೆಗೆಂದು ಸರ್ಕಾರದ ಬಳಿ ಈಗ 11 ಸಾವಿರ ಎಕರೆ ಭೂಮಿ ಇದ್ದು, ಅದರ ಮೌಲ್ಯ 8ರಿಂದ 10 ಸಾವಿರ ಕೋಟಿ ರೂ. ಆಗುತ್ತದೆ. ರಾಜ್ಯದಲ್ಲಿ ಎಲ್ಲೆಂದರಲ್ಲಿ ಕೈಗಾರಿಕಾ ಪ್ರದೇಶಗಳನ್ನು ಮಾಡುವ ಬದಲು ಬೇಡಿಕೆ ಆಧರಿಸಿ ಮಾಡಬೇಕು. ಇದರಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಒಂದು ನಿರ್ದಿಷ್ಟ ಮಾದರಿಯ ಉದ್ಯಮಗಳಿಗೆ ಮೀಸಲಿಟ್ಟಿರುವ ಜಾಗಗಳಲ್ಲಿ ಅಂತಹ ಉದ್ದಿಮೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದಿದ್ದರೆ, ಅಲ್ಲಿರುವ ಜಾಗವನ್ನು ಉಳಿದ ಉದ್ದಿಮೆಗಳಿಗೂ ಒದಗಿಸುವ ನೀತಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಅಗತ್ಯ ಆಧಾರಿತ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು. ಇಲ್ಲದೇ ಹೋದರೆ ಎಲ್ಲವೂ ಬರೀ ಭೂಸ್ವಾಧೀನದ ಹಂತದಲ್ಲೇ ನಿಂತು ಹೋಗುತ್ತದೆ. ನಮ್ಮಲ್ಲಿ ಕೈಗಾರಿಕಾ ಉದ್ದೇಶಕ್ಕೆಂದು ವಶಪಡಿಸಿಕೊಂಡಿರುವ ಜಮೀನು ದಶಕಗಳ ನಂತರವೂ ಹಾಗೆಯೇ ಉಳಿದುಕೊಂಡಿರುವುದಕ್ಕೆ ಇದೇ ಮೂಲಕಾರಣವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ, ಕೆಐಎಡಿಬಿ ಆಯುಕ್ತ ಮಹೇಶ್‌ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂಓದಿ:ನಾರ್ಮಲ್ ಹೆರಿಗೆಗಳನ್ನೇ ಮಾಡಿಸಿ, ಅನಿವಾರ್ಯತೆ ಇದ್ದರೆ ಮಾತ್ರ ಸಿಜೇರಿಯನ್ ಮಾಡಿ: ವೈದ್ಯರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ

ABOUT THE AUTHOR

...view details