ಬೆಂಗಳೂರು:ನಿವೇಶನ ನೋಂದಣಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಹಾಗೂ ಕಚೇರಿ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.
ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಹಾಗೂ ಕಚೇರಿ ಸಹಾಯಕನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆಐಎಡಿಬಿ ಕಚೇರಿ ಸಹಾಯಕ ಕಾರ್ಯದರ್ಶಿ ಶೀಲಾ ಹಾಗೂ ಕಚೇರಿ ಸಹಾಯಕ ಸಿ.ಎಂ.ಸ್ವಾಮಿ ಬಂಧಿತ ಆರೋಪಿಗಳು. ನಗರದ ನಿವಾಸಿಯೊಬ್ಬರಿಗೆ ಕೆಐಎಡಿಬಿಯಿಂದ ಕೋಲಾರದ ವೇಮಗಲ್‌ನಲ್ಲಿ ನಿರ್ಮಿಸಿರುವ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿ ಒಂದು ನಿವೇಶನ ಮಂಜೂರಾಗಿತ್ತು. ಈ ನಿವೇಶನವನ್ನು ನೋಂದಣಿ ಮಾಡಿಸಿಕೊಳ್ಳಲು ಅಗತ್ಯವಿರುವ ದಾಖಲಾತಿಗಳ ಬಗ್ಗೆ ಮಾಹಿತಿ ಪತ್ರ ನೀಡಲು ಕೆಐಎಡಿಬಿ ಕಚೇರಿಗೆ ಭೇಟಿ ಮಾಡಿ, ಸಹಾಯಕ ಕಾರ್ಯದರ್ಶಿ ಶೀಲಾ ಅವರನ್ನು ಸಂಪರ್ಕಿಸಿದ್ದಾರೆ.
ಅಗತ್ಯ ದಾಖಲಾತಿಗಳನ್ನು ನೀಡಲು ಅಧಿಕಾರಿಗಳು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಚೇರಿ ಸಹಾಯಕ ಸಿ.ಎಂ.ಸ್ವಾಮಿ, ಶೀಲಾ ಅವರ ಪರವಾಗಿ ದೂರುದಾರರಿಂದ 20 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರನ್ನು ಬಂಧಿಸಿ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.