ದೇವನಹಳ್ಳಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ( ಕೆಐಎ) ನಿಲ್ದಾಣದ ಉತ್ತರ ಭಾಗದ ರನ್ ವೇ ಮೇಲ್ದರ್ಜೆಗೇರಿಸುವ ಕಾಮಗಾರಿ ಕಳೆದ 10 ತಿಂಗಳಿಂದ ನಡೆಯುತ್ತಿದ್ದು, ಮೇಲ್ದರ್ಜೆಗೇರಿದ ರನ್ ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಈ ಮೂಲಕ ಎರಡು ಸಮಾನಾಂತರ ರನ್ ವೇ ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ರನ್‍ವೇ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ದಿಂದ ಒಪ್ಪಿಗೆ ಪಡೆದುಕೊಳ್ಳುವುದರೊಂದಿಗೆ ಇಂದು ಕಾರ್ಯಚರಣೆ ಆರಂಭಿಸಿದೆ. ಉತ್ತರ ರನ್ ವೇಯನ್ನು ಮೇಲ್ದರ್ಜೆಗೇರಿಸುವ ಕಾರಣದಿಂದ ಜೂನ್ 2020ರಿಂದ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿತ್ತು. ಉತ್ತರ ರನ್‍ವೇ ನವೀಕರಣ ಕಾಮಗಾರಿಯಲ್ಲಿ ಮೇಲ್ಮೈಯನ್ನು ಹೊಸ ಆಸ್‍ಫಾಲ್ಟ್ ಪದರಗಳೊಂದಿಗೆ ಭದ್ರಪಡಿಸುವುದು, ಎರಡು ನೂತನ ಟ್ಯಾಕ್ಸಿ ಮಾರ್ಗಗಳ ಸೇರ್ಪಡೆ ಮಾಡಲಾಗಿದೆ.