ಬೆಂಗಳೂರು/ ನವದೆಹಲಿ:ದೇಶಾದ್ಯಂತ ನಿಯಮಿತವಾಗಿ 10 ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯನ್ನು ನಡೆಸಲಾಗಿಲ್ಲ. ಅದನ್ನು ತಕ್ಷಣವೇ ಮಾಡಬೇಕು. ಇದರೊಂದಿಗೆ 2011 ರಲ್ಲಿ ಕಾಂಗ್ರೆಸ್ ನಡೆಸಿದ ಜಾತಿ ಗಣತಿ ವರದಿಯನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ಅವರು ಈ ವಿಷಯವಾಗಿ ಒತ್ತಾಯಿಸಿದ ಬೆನ್ನಲ್ಲೇ ಖರ್ಗೆ ಅವರೂ ಆಗ್ರಹಿಸಿದ್ದಾರೆ.
ಪಿಎಂಗೆ ತಾವು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿರುವ ಖರ್ಗೆ ಅವರು, 2011-12ರ ಅವಧಿಯಲ್ಲಿ ಯುಪಿಎ ಸರ್ಕಾರವು ಮೊದಲ ಬಾರಿಗೆ ಸುಮಾರು 25 ಕೋಟಿ ಕುಟುಂಬಗಳನ್ನು ಒಳಗೊಂಡ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸಿದೆ. ಆದರೆ, ಅದು ಈವರೆಗೂ ಪ್ರಕಟವಾಗಿಲ್ಲ. 2014 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಹಲವು ಬಾರಿ ವರದಿಯನ್ನು ಪ್ರಕಟ ಮಾಡಲು ಕೋರಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವಾಗಿ ಪ್ರಕಟಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನವೀಕೃತ ಜಾತಿ ಗಣತಿಯ ಮಾಹಿತಿ ಇಲ್ಲದೇ ಇರುವುದು, ದಾಖಲೆಗಳ ಬಗ್ಗೆ ಅನುಮಾನವಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಅದರಲ್ಲೂ ವಿಶೇಷವಾಗಿ ಒಬಿಸಿಗಳಿಗೆ ಯಾವ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಕೋರಿದ್ದಾರೆ.
2021 ರ ವೇಳೆಗೆ ಮಾಡಬೇಕಿದ್ದ ಜನ ಗಣತಿಯನ್ನು ಸರ್ಕಾರ ಮುಂದೂಡಿದೆ. ಯಾವ ಕಾರಣಕ್ಕಾಗಿ ಗಣತಿ ನಡೆಸಲಾಗಿಲ್ಲ ಎಂಬುದು ಜನರಿಗೆ ಗೊತ್ತಾಗಬೇಕು. ಅಲ್ಲದೇ, ಕೂಡಲೇ ದೇಶದಲ್ಲಿ ಜನಗಣತಿ ನಡೆಸಬೇಕು. ಇದರಿಂದ ದೇಶದಲ್ಲಿರುವ ಜನಸಂಖ್ಯೆ ಮತ್ತು ಜಾತಿವಾರು ಲೆಕ್ಕಾಚಾರ ಲಭ್ಯವಾಗಲಿದೆ ಎಂದು ಟ್ವಿಟರ್ನಲ್ಲಿ ಹಂಚಿಕೊಂಡ ಪತ್ರದಲ್ಲಿ ಹೇಳಿದ್ದಾರೆ.