ಕರ್ನಾಟಕ

karnataka

ETV Bharat / state

ಅನನುಭವಿ ರಾಹುಲ್ ಗಾಂಧಿ ಸಲಹೆಯಂತೆ ಖರ್ಗೆ ಕೆಲಸ: ಲಹರ್ ಸಿಂಗ್ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಟೀಕಿಸಿದ್ದಾರೆ.

ರಾಜ್ಯಸಭಾ ಸದಸ್ಯ ಲಹರ್ ಸಿಂಗ್
ರಾಜ್ಯಸಭಾ ಸದಸ್ಯ ಲಹರ್ ಸಿಂಗ್

By ETV Bharat Karnataka Team

Published : Aug 22, 2023, 4:47 PM IST

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಗಾಂಧಿ ಕುಟುಂಬ ಅವಕಾಶ ನೀಡುತ್ತಿಲ್ಲ. ಅನುಭವಿಯಾಗಿರುವ ಹಿರಿಯ ನಾಯಕ ಖರ್ಗೆ ಅವರಿಗೆ ಅನನುಭವಿ ರಾಹುಲ್ ಗಾಂಧಿ ಸಲಹೆ ನೀಡುತ್ತಿರುವುದು ಬೇಸರ ತಂದಿದೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯಾ ಟೀಕಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಿರಿಯ ಸಂಸದರಾದ ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ಸುರ್ಜೇವಾಲಾ ಅವರ ಆಣತಿಯಂತೆ ಖರ್ಗೆಯವರಂಥ ಎತ್ತರದ ನಾಯಕ ಕೆಲಸ ಮಾಡುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಎಐಸಿಸಿ ಮಾಜಿ ಮುಖ್ಯಸ್ಥ ಎಸ್. ನಿಜಲಿಂಗಪ್ಪ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತೆ ಖರ್ಗೆಯವರು ಸ್ವತಂತ್ರವಾಗಿ ಮತ್ತು ಯಾವುದೇ ಕುಟುಂಬದ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕದ ಮತ್ತೊಬ್ಬ ಧೀಮಂತ ರಾಜಕಾರಣಿ ಹೆಚ್.ಡಿ.ದೇವೇಗೌಡ ಅವರನ್ನು ಹತ್ತಿಕ್ಕಲು ಕೂಡ ಗಾಂಧಿ ಕುಟುಂಬ ಪ್ರಯತ್ನಿಸಿತು. ಆದರೆ ಅವರು ದೃಢವಾಗಿ ನಿಂತರು ಮತ್ತು ಗಾಂಧಿ ಕುಟುಂಬದ ಆಶಯದಂತೆ ವರ್ತಿಸಲು ನಿರಾಕರಿಸಿದರು. ಗಾಂಧಿ ಕುಟುಂಬ ಯಾವಾಗಲೂ ಕರ್ನಾಟಕದ ಹಿರಿಯ ನಾಯಕರ ವಿರುದ್ಧ ಪಕ್ಷಪಾತವನ್ನು ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷ ಅಥವಾ ಕುಟುಂಬಕ್ಕಿಂತ ದೇಶ ಮುಖ್ಯವಲ್ಲವೇ? ತಮ್ಮ ಕಾರ್ಯವೈಖರಿಗೆ ಸೂಚನೆಗಳನ್ನು ನೀಡುವುದಷ್ಟೇ ಅಲ್ಲದೇ ನೂತನ ಸಂಸತ್ತಿನ ಉದ್ಘಾಟನೆ ಬಹಿಷ್ಕರಿಸುವಂತಹ ಆದೇಶ ನೀಡುವ ಅವಕಾಶವನ್ನು ರಾಹುಲ್ ಗಾಂಧಿಯವರಿಗೆ, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಮಾಡಿಕೊಟ್ಟಿರುವುದು ಬೇಸರ ತಂದಿದೆ. ವಿರೋಧ ಪಕ್ಷದ ಸಂಸದರು ಅನಗತ್ಯವಾಗಿ ಕಲಾಪಕ್ಕೆ ಅಡ್ಡಿಪಡಿಸಿದ್ದು ಮಾತ್ರವಲ್ಲ, ಲೋಕಸಭೆಯಲ್ಲಿ ವಿರೋಧ ಪಕ್ಷಗಳೇ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ಅದಕ್ಕೆ ಪ್ರಧಾನಿಯವರು ಉತ್ತರವನ್ನು ಪೂರ್ಣವಾಗಿ ಕೇಳುವ ಮುನ್ನವೇ ಕಾಂಗ್ರೆಸ್ ಸಭಾತ್ಯಾಗ ಮಾಡಿದ್ದು ಸರಿಯಲ್ಲ. ಒಂದು ಕುಟುಂಬದ ಅಣತಿಯಂತೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೂಡ ಪಾಲ್ಗೊಳ್ಳದೇ ದೂರವುಳಿದು, ಈಗ ಖರ್ಗೆ ಸುಳ್ಳು ನೆಪ ಹೇಳುತ್ತಿದ್ದಾರೆ. ಪಕ್ಷ ಅಥವಾ ಕುಟುಂಬಕ್ಕಿಂತ ದೇಶ ಮುಖ್ಯವಲ್ಲವೇ ಎಂದು ಲಹರ್‌ ಸಿಂಗ್‌ ಪ್ರಶ್ನಿಸಿದರು.

ಮುಂಗಾರು ಅಧಿವೇಶನದಲ್ಲಿ 25 ಮಸೂದೆ ಅಂಗೀಕಾರ:ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿದ ಲಹರ್ ಸಿಂಗ್, ಸಂಸತ್ತಿನ ಮುಂಗಾರು ಅಧಿವೇಶನ ಯಶಸ್ವಿಯಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಹಲವು ಮಸೂದೆಗಳನ್ನು ಅಂಗೀಕರಿಸಲಾಗಿದೆ. ಹಾಗೆಯೇ ವಿರೋಧ ಪಕ್ಷಗಳ ಮೈತ್ರಿಕೂಟದ ಅಪಪ್ರಚಾರವನ್ನು ಜನರು ತಿರಸ್ಕರಿಸಿದ್ದಾರೆ. ವಿರೋಧ ಪಕ್ಷಗಳಿಂದ ನಿರಂತರ ಅಡ್ಡಿ ಮತ್ತು ಗದ್ದಲದ ನಡುವೆಯೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 25 ಮಸೂದೆಗಳನ್ನು ಮಂಡಿಸಲಾಗಿದೆ. 23 ವಿಧೇಯಕಗಳು ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದೆ. ಆಗಸ್ಟ್‌ 11 ರವರೆಗೆ ಏಳು ಮಸೂದೆಗಳನ್ನು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸಂಸತ್ತಿನಲ್ಲಿ ಅಗರಬತ್ತಿ ಉದ್ಯಮದ ಸಮಸ್ಯೆಗಳನ್ನು ಪ್ರಸ್ತಾಪಿಸುವ ಅವಕಾಶ ನನಗೆ ಸಿಕ್ಕಿದ್ದು, ಈ ಉದ್ಯಮವನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕರ್ನಾಟಕವು ಜಗತ್ತಿನ ‘ಅಗರಬತ್ತಿ ರಾಜಧಾನಿ’ಯಾಗಿದ್ದು, 4 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರಿಗೆ ಉದ್ಯೋಗ ದೊರೆತಿದೆ. ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ನೀಡುವ ಅವಾಸ್ತವ ಉಚಿತ ಯೋಜನೆಗಳು ಮತ್ತು ಅವು ಆರ್ಥಿಕತೆಯ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ರಾಜ್ಯಗಳ ದುಂದುವೆಚ್ಚ ತಡೆಯಲು ಶಾಸನ ರೂಪಿಸುವ ಬಗ್ಗೆ ಪರಿಶೀಲಿಸಲು ಸರ್ಕಾರವನ್ನು ಒತ್ತಾಯಿಸಿದ್ದೇನೆ ಎಂದು ಲಹರ್‌ ಸಿಂಗ್‌ ಹೇಳಿದರು.

ಲಹರ್‌ ಸಿಂಗ್‌ ಅವರು ಐಟಿ ಮತ್ತು ಕಮ್ಯುನಿಕೇಶನ್‌ನ ಸಂಸತ್‌ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ಇದು ನನಗೆ ಉತ್ತಮ ಅವಕಾಶವಾಗಿದ್ದು, ಈ ಮಸೂದೆ ವಿವಿಧ ಚರ್ಚೆಗಳ ಹಂತಗಳ ಮೂಲಕ ಸಾಗಿ ಬಂದಿರುವುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಇದು ವೈಯಕ್ತಿಕ ದತ್ತಾಂಶದ ರಕ್ಷಣೆಗಾಗಿ ಇರುವ ಭಾರತದ ಮೊದಲ ಸಮಗ್ರ ಕಾನೂನಾಗಿದೆ ಎಂದರು.

ಸದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸುವ ಮತ್ತು ಸತ್ಯ ತಿರುಚುವ ಪ್ರಯತ್ನ ಮಾಡಿದ ವಿರೋಧ ಪಕ್ಷಗಳನ್ನು ಟೀಕಿಸಿದ ಲಹರ್ ಸಿಂಗ್, ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿ ಉಭಯ ಸದನದ ಕಾರ್ಯಚಟುವಟಿಕೆಯನ್ನು ನೆಲಸಮ ಮಾಡಲು ನಿರಂತರವಾಗಿ ಪ್ರಯತ್ನಿಸಿದವು. ಇದರಿಂದಾಗಿ ಸದನ ಪದೇ ಪದೆ ಮುಂದೂಡಲ್ಪಟ್ಟಿತು ಎಂದು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ :'ಇಂಡಿಯಾ' ಗೋಸ್ಕರ ನೀರು ಬಿಟ್ಟಿದ್ದೀರಿ : ಸಿ ಟಿ ರವಿ ವಾಗ್ದಾಳಿ

ABOUT THE AUTHOR

...view details