ಬೆಂಗಳೂರು :ಮೂರು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮುಂಬರುವ ದಿನಗಳಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿಯೇ ಭಾರಿ ಅಸಮಾಧಾನವನ್ನು ಎದುರಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಪ್ರಮುಖ ಕಾರಣರಾದ ಬಾಬುರಾವ್ ಚಿಂಚನಸೂರ್ ಇಂದು ಮರಳಿ ಪಕ್ಷಕ್ಕೆ ಸೇರ್ಪಡೆಯಾದರೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಅವಕಾಶ ನೀಡಿಲ್ಲ. ಸದಾಶಿವ ನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದ ಚಿಂಚನಸೂರ್ ಈ ಸಂದರ್ಭ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರ ಗುಣಗಾನ ಮಾಡಿದ್ದಾರೆ.
ಆದರೆ ವಿಪರ್ಯಾಸವೆಂದರೆ ಡಿ ಕೆ ಶಿವಕುಮಾರ್ ನಿವಾಸದಿಂದ ಹೂಗಳತೆ ಎಷ್ಟು ದೂರದಲ್ಲಿದ್ದ ಖರ್ಗೆ ಅವರ ನಿವಾಸಕ್ಕೆ ಸೇರ್ಪಡೆಗೆ ಮುನ್ನ ಅಥವಾ ನಂತರ ತೆರಳಿ ಭೇಟಿಯಾಗುವ ಪ್ರಯತ್ನ ಮಾಡಿಲ್ಲ. ಇಂದು ಬೆಳಗಿನಿಂದಲೂ ತಮ್ಮ ನಿವಾಸದಲ್ಲಿಯೇ ಇದ್ದ ಖರ್ಗೆ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದು ಬಾಬುರಾವ್ಗೆ ಮಾತ್ರ ಬೇಟಿಯ ಅವಕಾಶ ನೀಡಿಲ್ಲ ಎನ್ನಲಾಗುತ್ತಿದೆ. ನಿನ್ನೆಯೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಬೇಕಿದ್ದ ಬಾಬುರಾವ್ ಚಿಂಚನಸೂರು ತಾವು ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಪಕ್ಷ ಸೇರುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಳಿಸಿ ಮಾರ್ಚ್ 25ರಂದು ಪಕ್ಷ ಸೇರ್ಪಡೆಯಾಗುವುದಾಗಿ ತಿಳಿಸಿದ್ದರು.
ತೊಡೆತಟ್ಟಿರುವ ನಾಯಕನ ಮರು ಸೇರ್ಪಡೆ ಇಷ್ಷವಿಲ್ಲವಾ? :ಸದ್ಯ ಬೆಂಗಳೂರಿನಲ್ಲಿಯೇ ಇರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗದೆ ಪಕ್ಷ ಸೇರ್ಪಡೆ ಆಗಿದ್ದಾರೆ. 2019ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲಬುರ್ಗಿ ಲೋಕಸಭೆ ಕ್ಷೇತ್ರದಲ್ಲಿ ಸೋಲಲು ಕೊಲಿ ಸಮುದಾಯಕ್ಕೆ ಸೇರಿರುವ ಬಾಬುರಾವ್ ಚಿಂಚನ್ಸೂರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ತಮ್ಮ ಹಳೆಯ ಕ್ಷೇತ್ರದ ಚಿತ್ತಾಪುರದಲ್ಲಿ ಸೋಲಿಸುವುದಾಗಿ ತೊಡೆತಟ್ಟಿದ್ದರು.
ಇದಾದ ಬಳಿಕ ಇಂದು ಸೇರ್ಪಡೆ ಸಂದರ್ಭ ಅದೆಲ್ಲ ವಿಚಾರಕ್ಕೂ ಕ್ಷಮೆ ಕೇಳಿದರಾದರು ಖರ್ಗೆ ಕುಟುಂಬದ ಸಾಮಿಪ್ಯ ಗಳಿಸುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಸಮಾರಂಭಕ್ಕೆ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ ಖರ್ಗೆ ಸಹ ಆಗಮಿಸಲಿಲ್ಲ. ಬಾಬುರಾವ್ ಚಿಂಚನಸೂರ್, ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ಹಾಗೂ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರದ ಕ್ಷಣದಿಂದಲೂ ಇವರ ಸೇರ್ಪಡೆ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಅಥವಾ ಪ್ರಿಯಾಂಕ್ ಖರ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ಷೇತ್ರದಲ್ಲಿ ತಮ್ಮನ್ನ ಕಡೆಗಣಿಸಿ ಮಾತನಾಡಿರುವ ಹಾಗೂ ತಮ್ಮ ವಿರುದ್ಧವೇ ತೊಡೆತಟ್ಟಿರುವ ನಾಯಕನ ಮರು ಸೇರ್ಪಡೆ ತಂದೆ ಮತ್ತು ಮಗನಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ.