ಹೊಸದಿಲ್ಲಿ/ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ಇಂದು ನವ ದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಹೆಚ್ಕೆಪಿ, ಜಾರ್ಜ್, ಸಲೀಂ, ಧ್ರುವನಾರಾಯಣ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಹಾಗು ಡಿ.ಕೆ.ಸುರೇಶ್ ಭಾಗಿಯಾಗಿದ್ದರು.
ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಒಂದೊಂದೇ ವಿಭಾಗದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಪ್ರಸ್ತಾಪವಾಗಿ ಇದರ ಬಗ್ಗೆ ಖಂಡ್ರೆ ಮಾಹಿತಿ ನೀಡಿದರು. ಈ ಭಾಗದಲ್ಲಿ 41 ಕ್ಷೇತ್ರಗಳಿದ್ದು, ಪ್ರಸ್ತುತ 18 ಕ್ಷೇತ್ರಗಳಲ್ಲಿ ನಮ್ಮ ಶಾಸಕರಿದ್ದಾರೆ. ನಮಗೆ ಕೆಲವು ಕ್ಷೇತ್ರಗಳು ಕಠಿಣವಾಗಿದ್ದು, ಕಲಬುರಗಿ ದಕ್ಷಿಣ, ಬಳ್ಳಾರಿ ನಗರ, ಔರಾದ್, ಗುರುಮಿಠ್ಕಲ್, ಯಾದಗಿರಿಯಲ್ಲಿ ಗೊಂದಲಗಳಿವೆ.
ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಆ ಕ್ಷೇತ್ರಗಳಲ್ಲಿ ನಾವು ಪಕ್ಷ ಸಂಘಟನೆ ಮಾಡಬೇಕಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು. ಬಿಜೆಪಿ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿದಾಗ ಮಾತ್ರ ಹೆಚ್ಚಿನ ಸೀಟು ಪಡೆಯಬಹುದು ಎಂದು ಅವರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.