ಬೆಂಗಳೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಸಮಾನತೆ, ವರ್ಣಭೇದ, ಜನಾಂಗೀಯ ಮತ್ತು ಪ್ರಾಂತ್ಯವಾರು ನಿಂದನೆ ಮೂಲಕ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಕಾರಣರಾಗಿದ್ದು, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಗಸ್ಟ್ 1 ರಂದು ಶಾಸಕ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹಾಗೂ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆಯವರ ತಲೆಮೇಲೆ ಕೂದಲು ಮುಚ್ಚಿಕೊಂಡಿರುವುದರಿಂದ ಕರಕಲಾಗದಂತೆ ಉಳಿದುಕೊಂಡಿರುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ವರ್ಣಭೇದ, ಜನಾಂಗೀಯ ನಿಂದನೆ ಮತ್ತು ಪ್ರಾಂತ್ಯವಾರು ಭೇದವನ್ನುಂಟು ಮಾಡಲು ಕಾರಣರಾಗಿದ್ದಾರೆ. ಈ ವಿಷಯ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ, ಪ್ರಾಂತ್ಯವಾರು ಘರ್ಷಣೆಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಕಾರ್ಯದರ್ಶಿ ಹೆಚ್ ಎಂ ರೇಣುಕ ಪ್ರಸನ್ನ ಉಲ್ಲೇಖಿಸಿದ್ದಾರೆ.
ಬಸವಣ್ಣನವರ ನಾಡಿನಿಂದ ಬಂದಂತಹ ಹಾಗೂ ಬಸವಾದಿ ಶರಣರ ಆಶಯಗಳನ್ನು ಮೈಗೂಡಿಸಿಕೊಂಡು ಅದರಂತೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆಯವರ ವಿರುದ್ಧ ಸಂವಿಧಾನ ಬಾಹಿರ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿರುವ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಬಂಧಿಸಬೇಕೆಂದು ಎಂದು ಠಾಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.