ಬೆಂಗಳೂರು:ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕುಮಾರ ಕೃಪಾ ಗೆಸ್ಟ್ಹೌಸ್ನಲ್ಲಿ ಕೆ.ಸಿ ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿ, ದೊಡ್ಡ ಪಕ್ಷವಾಗಿರುವ ಕಾರಣ ಕೊಂಚ ಭಿನ್ನಮತ ಉಂಟು. ಕಾಂಗ್ರೆಸ್ಗೆ ಹಿಂದೆಯೂ ಇಂತಹ ಪರಿಸ್ಥಿತಿ ಬಂದಿತ್ತು. ಮತ್ತೆ ಬಲಿಷ್ಠವಾಗಿ ಪಕ್ಷ ಸಂಘಟನೆ ಆಗಿದೆ. ಈಗಲೂ ಮತ್ತೆ ಪಕ್ಷ ಸದೃಡವಾಗಿ ಬೆಳೆಯಲಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಎಂದರು.
ಸೋಲಿಗೆ ಕಾರಣಗಳಿವೆ.ಆದರೆ ಹೇಳುವ ಸಂದರ್ಭ ಇದಲ್ಲ. ಮತ್ತೊಮ್ಮೆ ಆ ಎಲ್ಲ ಕಾರಣಗಳನ್ನು ಹೇಳುತ್ತೇನೆ. ಕೋಲಾರದಲ್ಲಿ ಗೆದ್ದವರು ಒಳ್ಳೆಯ ಕೆಲಸ ಮಾಡಲಿ. ಲೀಡರ್ಸ್ ಬರ್ತಾರೆ ಹೋಗ್ತಾರೆ. ಆದರೆ ಕಾರ್ಯಕರ್ತರು ಇರ್ತಾರೆ. ಕೋಲಾರದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.
ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪಕ್ಷ ಸಂಘಟನೆ ಸಂಬಂಧ ಮಾತನಾಡಲು ಆಗಮಿಸಿದ್ದೆ. ನನ್ನ ಅಭಿಪ್ರಾಯ, ವಿವರ ಸಲ್ಲಿಸಿದ್ದೇನೆ. ನನ್ನದು ಕೇವಲ ಸಲಹೆ. ಸ್ವೀಕರಿಸುವುದು ನಾಯಕರಿಗೆ ಬಿಟ್ಟದ್ದು ಎಂದರು.
ಇದೇ ಸಂದರ್ಭ ಮಾಜಿ ಸಂಸದರಾದ ಚಂದ್ರಪ್ಪ, ಧ್ರುವ ನಾರಾಯಣ್ ಕೂಡ ಕುಮಾರಕೃಪ ಅತಿಥಿಗೃಹಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ಮಾತನಾಡಿದ ಧ್ರುವ ನಾರಾಯಣ, ನಾವು ಸೋತಿರುವ ನಾಯಕರು, ವೇಣುಗೋಪಾಲ್ ಬೆಂಗಳೂರಿನಲ್ಲಿ ಇದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಕೇವಲ ಸೌಹಾರ್ದ ಭೇಟಿಗೆ ಆಗಮಿಸಿದ್ದೆವು. ವಿಶೇಷ ಭೇಟಿ ಅಲ್ಲ ಎಂದರು.