ಬೆಂಗಳೂರು: ಕೃತಿಸ್ವಾಮ್ಯ ಉಲ್ಲಂಘನೆ ಆರೋಪದಡಿ ತಮ್ಮ ವಿರುದ್ಧ ಯಶವಂತಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ವಜಾ ಮಾಡುವಂತೆ ಕೋರಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧದ ಎಫ್ಐಆರ್ ರದ್ದುಪಡಿಸಲು ನ್ಯಾ. ಎಂ. ನಾಗಪ್ರಸನ್ನ ಅವರ ನೇತೃತ್ವದ ಪೀಠ ನಿರಾಕರಿಸಿತು.
ಅಲ್ಲದೆ, "ಅರ್ಜಿದಾರರು ಅನುಮತಿ ಪಡೆಯದೇ ಸೋರ್ಸ್ ಕೋಡ್ ತಿರುಚಿದ್ದು (ಟ್ಯಾಂಪರ್), ಅದನ್ನು ಬಳಕೆ ಮಾಡಿರುವುದು ಅನುಮಾನರಹಿತವಾಗಿ ದೂರುದಾರರ ಕೃತಿಸ್ವಾಮ್ಯದ ಉಲ್ಲಂಘನೆಗೆ ಸಮನಾಗಿದೆ. ಅರ್ಜಿದಾರರು ದೂರುದಾರರ ಕೃತಿಸ್ವಾಮ್ಯವನ್ನು ಲಘುವಾದ ರೀತಿಯಲ್ಲಿ ಬಳಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಸಾಕ್ಷ್ಯ ಪರಿಶೀಲಿಸಬೇಕಾದ ಪ್ರಕರಣವಾಗಿದ್ದು, ತನಿಖೆಯಿಂದ ಹೊರಬರಬೇಕಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ" ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ದೇಶದಾದ್ಯಂತ ಭಾರತ್ ಜೋಡೋ ಯಾತ್ರೆಯ ಪ್ರಚಾರ ವಿಡಿಯೋಗೆ ಕೆಜಿಎಫ್-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯು ಕಾಂಗ್ರೆಸ್ ನಾಯಕರ ವಿರುದ್ಧ ಪ್ರತ್ಯೇಕವಾಗಿ ಸಿವಿಲ್ ಮತ್ತು ಕ್ರಿಮಿನಲ್ ದಾವೆ ಹೂಡಿತ್ತು.