ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಅಮಾನತು: ಕೆಪಿಸಿಸಿ ಆದೇಶ - ಕೆಜಿಎಫ್ ಬಾಬು

ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಶಿಸ್ತು ಕ್ರಿಯಾ ಸಮಿತಿ ಅಧ್ಯಕ್ಷ ಕೆ ರಹಮಾನ್ ಖಾನ್ ಅವರು ಆದೇಶ ಮಾಡಿದ್ದಾರೆ.

kgf-babu-suspended-from-congress-party
ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಅಮಾನತುಗೊಳಿಸಿ ಕೆಪಿಸಿಸಿ ಆದೇಶ

By

Published : Jan 6, 2023, 10:01 PM IST

Updated : Jan 6, 2023, 11:03 PM IST

ಬೆಂಗಳೂರು:ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನುತುಗೊಳಿಸಿ ಕೆಪಿಸಿಸಿ ಶಿಸ್ತು ಕ್ರಿಯಾ ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಆದೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಿಸ್ತು ಪಾಲನಾ ಸಮಿತಿಯಿಂದ ತಮಗೆ ಈಗಾಗಲೇ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಮೂರು ತಿಂಗಳ ಹಿಂದೆಯೇ ತಾವು ಪಕ್ಷದ ನೀತಿಯ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ನೋಟಿಸ್ ನೀಡಲಾಗಿದೆ.

ನೀವು ಶಿಸ್ತು ಸಮಿತಿಯ ಕಾರಣ ಕೇಳಿ ನೋಟಿಸ್‌ಗೆ ಸಮಂಜಸ ಉತ್ತರ ನೀಡಿರುವುದಿಲ್ಲ. ಇಂದು (ಶುಕ್ರವಾರ) ಕೂಡ ಸ್ವಯಂ ಪ್ರೇರಿತರಾಗಿ ನೀವು ಪಕ್ಷದ ಕಚೇರಿಯಲ್ಲಿ, ಅಧ್ಯಕ್ಷರ ಪೂರ್ವಾನುಮತಿ ಇಲ್ಲದೇ, ಪಕ್ಷವನ್ನು ಉದ್ದೇಶಿಸಿ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದೀರಿ. ನಿಮ್ಮ ಈ ನಡೆಯು ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ. ಹಾಗೂ ಹಿನ್ನಡೆಗೂ ಕಾರಣವಾಗುತ್ತಿದೆ ಎಂದು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ನಿಮ್ಮನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಗದ್ದಲ:ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಕೆಜಿಎಫ್ ಬಾಬು ಅವರು ಮಾಧ್ಯಮದವರ ಜೊತೆ ಮಾತನಾಡುತ್ತ, ಇದೇ ರೀತಿ ಇದ್ದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ 80 ಸ್ಥಾನವೂ ಗೆಲ್ಲಲ್ಲ ಎಂದಿದ್ದರು‌. ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದು, ಕೆಜಿಎಫ್ ಬಾಬು ವಿರುದ್ಧ ಕಿಡಿಕಾರಿದ್ದರು. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.

ಪಕ್ಷದ ಅಧ್ಯಕ್ಷರು ಹೆಂಡತಿ, ಮಕ್ಕಳನ್ನು ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿ ಇಲ್ಲ. ಇಲ್ಲಿ ಬಂದವರಿಗೆ ಮರ್ಯಾದೆ ಕೊಡಲ್ಲ ಎಂದು ಏರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದ್ದರು. ಈ ವೇಳೆ, ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು, ಇದನ್ನೆಲ್ಲ ಹೋಗಿ ಹೊರಗೆ ಮಾತನಾಡಿ. ಕೆಪಿಸಿಸಿ ಕಚೇರಿಯಲ್ಲಿ ನಿಂತು ಮಾತನಾಡಬೇಡಿ ಎಂದು ತಾಕೀತು ಮಾಡಿದ್ದರು. ಈ ವೇಳೆ, ವಾಗ್ವಾದ ನಡೆದು, ಕೆಜಿಎಫ್‌ ಬಾಬು ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯಿಂದ ಹೊರಗೆ ಕಳುಹಿಸಿದ್ದರು.

ಪಕ್ಷದ ಕಚೇರಿಯಲ್ಲಿ ನಿಂತು ಪಕ್ಷಕ್ಕೆ ಚ್ಯುತಿ ಬರುವಂತೆ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಮುಖಂಡ ಎಸ್‌.ಮನೋಹರ್ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರಿಗೆ ಮಾಹಿತಿ ರವಾನೆ ಮಾಡಿದ್ದರು. ಇದೀಗ ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬುರನ್ನು ಅಮಾನತುಗೊಳಿಸಲು ಕೆಪಿಸಿಸಿ ಆದೇಶಿಸಿದೆ.

ಕಾಂಗ್ರೆಸ್​​ಗೆ ಕೆಜಿಎಫ್ ಬಾಬು ಎಚ್ಚರಿಕೆ: ಗಲಾಟೆ ಬಳಿಕ ವಸಂತನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಕೆಜಿಎಫ್ ಬಾಬು, 'ನನಗೆ ಕಾಂಗ್ರೆಸ್ ಬ್ಯಾನರ್​ನಿಂದ ಗೆದ್ದು ಬರುವ ಅನಿವಾರ್ಯತೆ ಇಲ್ಲ. ಜನ ನನ್ನನ್ನು ಗೆಲ್ಲಿಸುತ್ತಾರೆ. ಪಕ್ಷದಿಂದ ನನ್ನನ್ನು ತೆಗೆದರೆ ಕಾಂಗ್ರೆಸ್ ಗೆ 10ರಿಂದ 15 ಸ್ಥಾನಗಳ ಹಿನ್ನಡೆ ಆಗುತ್ತದೆ. ಕಾಂಗ್ರೆಸ್​​ನಿಂದ ತೆಗಿಯಿರಿ, ಆದರೆ, ಗೌರವಯುತವಾಗಿ ತೆಗೆಯಿರಿ. ಇಲ್ಲವಾದರೆ ನಾನು ಏನು ಎಂಬುದನ್ನು ತೋರಿಸುತ್ತೇನೆ. ನಾನು ರೆಬೆಲ್ ಅಭ್ಯರ್ಥಿಯಾಗಿ ನಿಂತರೆ 10 ಸ್ಥಾನ ಗೆಲ್ಲಿಸಿ ಕೊಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದರು.

ಇದೇ ವೇಳೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಿರುದ್ಧ ಕೆಂಡಾಮಂಡಲರಾಗಿ ಕೆಜಿಎಫ್ ಬಾಬು, 'ಕೆಪಿಸಿಸಿಯಲ್ಲಿ ತಪ್ಪು ನಡೆಯುತ್ತಿದೆ. ಯುವಕರು, ಮಹಿಳೆಯರು ಹಾಗೂ ಕಾರ್ಯಕರ್ತರು ಬಂದರೆ ಮರ್ಯಾದೆ ಕೊಡುವುದಿಲ್ಲ. ನನಗೆ ಕೆಪಿಸಿಸಿ ಕಚೇರಿಗೆ ಬಿಡಬೇಡ ಅಂತ ಸಲೀಂ ಅಹಮ್ಮದ್ ಹೇಳಿದ್ದಾರೆ‌. ಆದರೆ, ಅವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಸಲೀಂ ಅಹಮ್ಮದ್ ಕೈಯ್ಯಲ್ಲಿ ಏನಾಗುತ್ತದೆ. ಅವರಿಗೆ ನಾಲ್ಕು ಜನರ ಪರಿಚಯ ಇಲ್ಲ. ಅವರನ್ನು ತೆಗೆದು ಹಾಕಿದರೆ ಎಲ್ಲ ಸರಿಯಾಗುತ್ತದೆ. ನಾನು ಏನೂ ತಪ್ಪಾಗಿ ಮಾತನಾಡಿಲ್ಲ' ಎಂದು ಗುಡುಗಿದ್ದರು.

ಜೆಡಿಎಸ್ ಪಕ್ಷದತ್ತ?:'ಕಾಂಗ್ರೆಸ್ ಪಕ್ಷದಿಂದ ತೆಗೆದರೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವುದಾಗಿ ಕೆಜಿಎಫ್ ಬಾಬು ತಿಳಿಸಿದ್ದಾರೆ. ಈಗಾಗಲೇ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ನನ್ನ ಮನೆಗೆ ಭೇಟಿ ನೀಡಿ, ಜೆಡಿಎಸ್​​ಗೆ ಸೇರುವಂತೆ ಕೇಳಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ತೆಗೆಯಿರಿ, ಆ ಮೇಲೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತೇನೆ' ಎಂದು ಕೆಜಿಎಫ್ ಬಾಬು ಹೇಳಿದ್ದರು.

ಇದನ್ನೂ ಓದಿ:ನನ್ನನ್ನು ಗೌರವಯುತವಾಗಿ ಪಕ್ಷದಿಂದ ತೆಗೆಯಿರಿ, ಇಲ್ಲವಾದರೆ ಕಾಂಗ್ರೆಸ್​ಗೆ ಹಾನಿಯಾಗುತ್ತೆ: ಕೆಜಿಎಫ್ ಬಾಬು ವಾರ್ನಿಂಗ್​

Last Updated : Jan 6, 2023, 11:03 PM IST

ABOUT THE AUTHOR

...view details